ಬೆಂಗಳೂರು, ಆ. 11 (DaijiworldNews/AK): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಲ್ಲಿ ಆಗ ಸಚಿವರಾಗಿದ್ದ ನಾಗೇಂದ್ರ ಅವರಿಗೆ ಕ್ಲೀನ್ಚಿಟ್ ಸಿಕ್ಕಿಲ್ಲ. ಅವರ ವಿರುದ್ಧ ತನಿಖೆ ಸಹ ನಡೆಯುತ್ತಿದೆ. ಆದರೂ ಮತ್ತೆ ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸುವ ಅನಿವಾರ್ಯತೆ ಶಿವಕುಮಾರ್ ಅವರಿಗೆ ಏನಿತ್ತು. ಅವರಿಗೆ ಏನಾದರೂ ಭಯವಿತ್ತೇ? ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಏನಾದರೂ ಇತ್ತಾ ಎಂದು ಪ್ರಶ್ನಿಸಿದರು.
ಮತ್ತೆ ಮಂತ್ರಿ ಮಾಡಿರುವುದು ಅಕ್ಷಮ್ಯ ಅಪರಾಧ
ನೂರಾರು ಕೋಟಿ ಹಗರಣ ಆಗಿದೆ. ಹಗರಣದ ಬಗ್ಗೆ ಆಗಿನ ಸಿಎಂ ಸಹ ಒಪ್ಪಿಕೊಂಡಿದ್ದರು. ನಾಗೇಂದ್ರ ಅವರ ವಿರುದ್ಧ ಆರೋಪಪಟ್ಟಿ ಸಹ ಇದೆ. ಆದರೂ ಅವರನ್ನು ಮತ್ತೆ ಮಂತ್ರಿ ಮಾಡಿರುವುದು ಅಕ್ಷಮ್ಯ ಅಪರಾಧ. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಮೀಸಲಿಟ್ಟ ಹಣ ನುಂಗಿದವರನ್ನೇ ಸಚಿವರನ್ನಾಗಿ ಮಾಡಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡಿದೆ ಎಂದು ತಿಳಿಸಿದರು.
ಇ ಡಿ ದಾಖಲೆಯಲ್ಲಿ ಎಲ್ಲವೂ ಉಲ್ಲೇಖ
ವಾಲ್ಮೀಕಿ ಅಭಿವೃದ್ಧಿ ನಿಗಮದ186 ಕೋಟಿ ರೂ. ಹಗರಣ ನಡೆದ ಕಾರಣಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರು ಎಂಬುದನ್ನು ಈಗಿನ ಸಿ.ಎಂ ನೆನಪಿಸಿಕೊಳ್ಳಬೇಕು. ನಿಗಮದ ಹಣ ಕೊಳ್ಳೆ ಹೊಡೆದು ತೆಲಂಗಾಣದಲ್ಲಿ ಸಾವಿರಾರು ಖಾತೆಗಳನ್ನು ತೆರೆದು ಡ್ರಾ ಮಾಡಿ ಚುನಾವಣೆಗೆ ಬಳಸಿದ್ದರು. ಇದೆಲ್ಲ ಇ. ಡಿ. ದಾಖಲೆಯಲ್ಲಿ ಉಲ್ಲೇಖವಾಗಿದೆ. ಈ ಹಗರಣದಲ್ಲಿ ಅಮಾಯಕ ಅಧಿಕಾರಿ ಚಂದ್ರಶೇಖರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡರು ಎಂದು ಗಮನ ಸೆಳೆದರು.
ಸದನದ ಹೊರಗೆ, ಒಳಗೆ ಹೋರಾಟ
ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಿ ಎಂದು ಸದನ ಆರಂಭವಾಗುವ ಮೊದಲೇ ಮುಖ್ಯಮಂತ್ರಿಗಳಿಗೆ ನಾವು ಆಗ್ರಹಿಸುತ್ತಿದ್ದೇವೆ. ಬದಲಿಗೆ ಅವರದೇ ಸಮುದಾಯದವರನ್ನು ಬೇಕಿದ್ದರೆ ಸಚಿವರಾಗಿ ಮಾಡಿ. ರಾಜೀನಾಮೆ ಪಡೆಯುವರೆಗೆ ಸದನದ ಹೊರಗೆ ಮತ್ತು ಒಳಗೆ ಜೆಡಿಎಸ್ ಜೊತೆ ಹೋರಾಟ ಮಾಡುತ್ತೇವೆ. ಸದನ ಸರಿಯಾದ ದಿಕ್ಕಿನಲ್ಲಿ ನಡೆಯಬೇಕು ಎಂಬುದು ವಿರೋಧ ಪಕ್ಷದ ಅಪೇಕ್ಷೆ. ನಾಗೇಂದ್ರ ಅವರ ರಾಜೀನಾಮೆ ಪಡೆದು ಪರಿಶಿಷ್ಟ ಪಂಗಡಕ್ಕೆ ಸರ್ಕಾರ ನ್ಯಾಯ ನೀಡಲಿ ಎಂದು ಒತ್ತಾಯಿಸಿದರು.