ನವದೆಹಲಿ, ಆ. 11 (DaijiworldNews/TA): ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಐತಿಹಾಸಿಕ ಕೆಂಪುಕೋಟೆ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ‘ವಂದೇ ಮಾತರಂ’ ಗೀತೆಯನ್ನು ಪ್ರಸ್ತುತಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ನೇತೃತ್ವ ವಹಿಸಲಿದ್ದು, ಕಾರ್ಯಕ್ರಮದ ಆರಂಭದಲ್ಲೇ ‘ವಂದೇ ಮಾತರಂ’ ಗಾಯನ ನಡೆಯಲಿದೆ. ಬಳಿಕ ಪ್ರಧಾನಮಂತ್ರಿಯವರಿಂದ ಧ್ವಜಾರೋಹಣ ನೆರವೇರಲಿದ್ದು, ನಂತರ ರಾಷ್ಟ್ರಗೀತೆ ‘ಜನ ಗಣ ಮನ’ ಪ್ರಸ್ತುತಗೊಳ್ಳಲಿದೆ ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ ‘ವಂದೇ ಮಾತರಂ’ ಗೀತೆ 2026ರಲ್ಲಿ 150 ವರ್ಷಗಳನ್ನು ಪೂರೈಸುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ ಈ ಗೀತೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ.
1875ರಲ್ಲಿ ರಚನೆಯಾದ ಈ ಗೀತೆ ಮೊದಲು ‘ಬಂಗದರ್ಶನ’ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಬಳಿಕ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರ ಪ್ರಸಿದ್ಧ ‘ಆನಂದಮಠ’ ಕಾದಂಬರಿಯ ಭಾಗವಾಯಿತು. ಮುಂದೆ ಇದು ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಸಾಂಸ್ಕೃತಿಕ ಸಂಕೇತವಾಗಿ ಗುರುತಿಸಿಕೊಂಡಿತು. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಥೀಮ್ಗಳಲ್ಲಿ ಒಂದಾಗಿ 2047ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ರೂಪಿಸುವಲ್ಲಿ ಯುವಜನರ ಪಾತ್ರವನ್ನು ಆಯ್ಕೆ ಮಾಡಲಾಗಿದೆ.
ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಕೊಡುಗೆ, ಸಾಧನೆ ಮತ್ತು ಸಾಮರ್ಥ್ಯವನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ರಕ್ಷಣಾ ಸಚಿವಾಲಯ ರೂಪಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯುವಜನರ ಸಾಧನೆಗಳನ್ನು ಗುರುತಿಸುವುದರ ಜೊತೆಗೆ, ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಲಾಗುತ್ತದೆ.
ಕೆಂಪುಕೋಟೆಯಲ್ಲಿ ನಡೆಯಲಿರುವ ಈ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸುಮಾರು 27,000ಕ್ಕೂ ಹೆಚ್ಚು ಗಣ್ಯರು, ವೀಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಸುಮಾರು 2,500 ಎನ್ಸಿಸಿ ಕೆಡೆಟ್ಗಳು ಹಾಗೂ ‘ಮೈ ಭಾರತ್’ ಸ್ವಯಂಸೇವಕರು ಕೆಂಪುಕೋಟೆಯ ಮುಂಭಾಗದ ಜ್ಞಾನಪಥದಲ್ಲಿ ‘ವಂದೇ ಮಾತರಂ’ ಎಂಬ ಅಕ್ಷರ ವಿನ್ಯಾಸವನ್ನು ರೂಪಿಸಲಿದ್ದಾರೆ.
‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರವು 2025ರ ನವೆಂಬರ್ನಿಂದಲೇ ವರ್ಷಪೂರ್ತಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ದೇಶಾದ್ಯಂತ ಸಾಮೂಹಿಕ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಿಲಿಟರಿ ಬ್ಯಾಂಡ್ಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ.
2026ರ ಗಣರಾಜ್ಯೋತ್ಸವದಲ್ಲೂ ‘ವಂದೇ ಮಾತರಂ’ ಪ್ರಮುಖ ವಿಷಯವಾಗಿತ್ತು. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಈ ಗೀತೆಯ ಗಾಯನಕ್ಕೆ ಅವಕಾಶ ನೀಡಿರುವುದು ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಮತ್ತೊಮ್ಮೆ ಸ್ಮರಿಸುವ ಪ್ರಮುಖ ಹೆಜ್ಜೆಯಾಗಿದೆ. ಈ ಬಾರಿ ಕೆಂಪುಕೋಟೆಯಲ್ಲಿ ‘ವಂದೇ ಮಾತರಂ’ನಿಂದ ಆರಂಭವಾಗಲಿರುವ ಸ್ವಾತಂತ್ರ್ಯೋತ್ಸವ, ದೇಶಭಕ್ತಿ, ಯುವಶಕ್ತಿ ಮತ್ತು ‘ವಿಕಸಿತ ಭಾರತ’ದ ಸಂಕಲ್ಪವನ್ನು ಒಂದೇ ವೇದಿಕೆಯಲ್ಲಿ ಪ್ರತಿಬಿಂಬಿಸಲಿದೆ.