ಬೆಂಗಳೂರು, ಆ. 11 (DaijiworldNews/TA): ಸಿಲಿಕಾನ್ ಸಿಟಿ ಬೆಂಗಳೂರು ಎಂದಾಕ್ಷಣ ಟ್ರಾಫಿಕ್ ಜಾಮ್ ನೆನಪಾಗುವುದು ಸಹಜ. ಆದರೆ, ಈ ಬಾರಿ ವಾಹನಗಳ ದಟ್ಟಣೆಯಿಂದಲ್ಲ, ಹಸುಗಳ ಹಿಂಡಿನಿಂದಲೇ ಟ್ರಾಫಿಕ್ ಜಾಮ್ ಉಂಟಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆಯಲ್ಲಿ ಹಸುಗಳನ್ನು ಬಿಟ್ಟಿದ್ದ ಆರೋಪದ ಮೇಲೆ ಅವುಗಳ ಮಾಲೀಕನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಆಗಸ್ಟ್ 10ರ ಬೆಳಗ್ಗೆ ಬೆಂಗಳೂರಿನ ಕಳಾಮಂದಿರ ಸಮೀಪದ ರಿಂಗ್ ರಸ್ತೆಯಲ್ಲಿ ಸುಮಾರು 9ರಿಂದ 10 ಹಸುಗಳು ರಸ್ತೆಯಲ್ಲೇ ಓಡಾಡುತ್ತಿದ್ದವು. ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಮಾರತ್ತಹಳ್ಳಿಯ ಅಶ್ವಥನಗರ ನಿವಾಸಿ ಸಂತೋಷ್ ಎಂಬ ಹಸುಗಳ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಸುಗಳನ್ನು ರಸ್ತೆಗೆ ಬಿಟ್ಟು, ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುವಂತೆ ಮಾಡಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಘಟನೆ ನಡೆದ ವೇಳೆ ರಿಂಗ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ HAL ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ನಾಗೇಂದ್ರ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಸಂತೋಷ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 285 ಅಡಿ ಪ್ರಕರಣ ದಾಖಲಿಸಲಾಗಿದೆ. ರಸ್ತೆಯಲ್ಲಿ ಪ್ರಾಣಿಗಳನ್ನು ನಿಯಂತ್ರಣವಿಲ್ಲದೆ ಬಿಡುವುದರಿಂದ ವಾಹನ ಸವಾರರಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರು ಟ್ರಾಫಿಕ್ಗೆ ವಾಹನಗಳಷ್ಟೇ ಅಲ್ಲ ಇದೀಗ ಹಸುಗಳೂ ಕಾರಣವಾಗುತ್ತಿವೆಯಾ ಎಂಬ ಚರ್ಚೆಗೆ ಈ ಘಟನೆ ಕಾರಣವಾಗಿದೆ.