ಧಾರವಾಡ, ಆ. 11 (DaijiworldNews/AA): ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದ ವಾಹನ ಹರಿದು ಎರಡು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಹುಲ್ಲಿಕೇರಿ ಗ್ರಾಮದ ಲುಕ್ಮಾನ್ ಬೋಗೂರ (2) ಮೃತ ಮಗು.
ಶಾಲಾ ಮಕ್ಕಳನ್ನು ಕರೆದೊಯ್ಯಲು ಶಾಲಾ ವಾಹನ ಹುಲ್ಲಿಕೇರಿ ಗ್ರಾಮಕ್ಕೆ ಬಂದಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಮಗುವಿನ ಮೇಲೆ ವಾಹನ ಹರಿದು ಹೋಗಿದೆ. ಪರಿಣಾಮ ಮಗುವಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ ಎಂದು ಹೇಳಲಾಗಿದೆ.
ಈ ಘಟನೆ ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.