ನವದೆಹಲಿ,ಆ. 11 (DaijiworldNews/AK): ಬುದ್ದಿವಂತರ ಜಿಲ್ಲೆ ಎಂದು ಹೆಸರಾದ ತುಳುನಾಡಿನಲ್ಲಿ ಭಾರತ ಸರಕಾರದ ಐಎಎಸ್, ಐಪಿಎಸ್ ಮುಂತಾದ ಹುದ್ದೆಗಳಲ್ಲಿ ತುಳುವರ ಸಾಧನೆ ಹೇಳಿಕೊಳ್ಳುವಂತಿಲ್ಲ. ಆ ನೆಲೆಯಲ್ಲಿ ತುಳುನಾಡಿನ ಇಂದಿನ ಯುವಪೀಳಿಗೆ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ಸರಕಾರದ ಉನ್ನತ ಹುದ್ದೆಗಳತ್ತ ಆಸಕ್ತಿ ಬೆಳೆಸುವಂತಾಗಬೇಕು ಎಂದು ದಾಯ್ಜಿವರ್ಲ್ದ್ ಸಮೂಹದ ಸಂಸ್ಥಾಪಕ, ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಹೇಳಿದರು.


ಅವರು ಇತ್ತೀಚೆಗೆ ನವದೆಹಲಿಯ ಲೋಧಿ ಎಸ್ಟೇಟ್ನಲ್ಲಿರುವ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ದೆಹಲಿ ತುಳುಸಿರಿ ಆಯೋಜಿಸಿದ ಆಟಿದ ಗೇನ ಕಾರ್ಯಕ್ರಮವನ್ನು ಹಿಂಗಾರ ಅರಳಿಸಿ ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಮಹನೀಯರು ಬ್ಯಾಂಕ್, ಶಿಕ್ಷಣ, ಹೋಟೆಲ್ ಉದ್ಯಮಗಳಲ್ಲಿ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದವರು. ಇಂದು ನಗರಜೀವನದಲ್ಲಿ ಬದುಕುತ್ತಿರುವ ನಮಗೆ ಹಿರಿಯರ ಜೀವನಕ್ರಮ ಆದರ್ಶವಾದುದು. ಹಿರಿಯರ ಪ್ರತಿಯೊಂದು ಆಚರಣೆಯಲ್ಲಿ ಸತ್ವವಿದೆ. ಬದುಕಿನ ನೆಲೆಯನ್ನು ಕಂಡುಕೊಂಡು ಹೊರನಾಡಿಗೆ, ವಿದೇಶಗಳಿಗೆ ವಲಸೆ ಹೋದ ತುಳುವರು ತಮ್ಮ ಮಣ್ಣಿನ ಮೂಲ ಸಂಸ್ಕೃತಿಯನ್ನು ಮರೆಯಲಾರರು. ಜಾತಿ, ಧರ್ಮವನ್ನು ಮೀರಿ ಭಾಷೆಯ ನೆಲೆಯಲ್ಲಿ ಒಂದಾಗುವವರು ತುಳುವರು ಎಂದು ಹೇಳಿದರು.
ತುಳುವರ ಆಟಿ ತಿಂಗಳ ಹಿನ್ನೆಲೆ, ಮಹತ್ವದ ಕುರಿತು ಮಾತನಾಡಿದ ಮುಖ್ಯ ಅತಿಥಿ ಕೇಂದ್ರಾಡಳಿತ ಪ್ರದೇಶ ಚಂಡೀಗಡ ಇಲ್ಲಿನ ಮುಖ್ಯ ಕಾರ್ಯದರ್ಶಿ ಹೆಚ್. ರಾಜೇಶ್ ಪ್ರಸಾದ್ ಐಎಎಸ್ ಅವರು ನಮ್ಮ ಹಿರಿಯರಿಗೆ ಆಟಿ ತಿಂಗಳು ಕಷ್ಟದ ತಿಂಗಳಲ್ಲ, ಅದು ಅವರ ಬದುಕಾಗಿತ್ತು. ಆ ಸಮಯದಲ್ಲಿ ಪ್ರಕೃತಿದತ್ತವಾದ ಔಷಧೀಯ ಹಿನ್ನೆಲೆಯುಳ್ಳ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದುದು ವಿಶೇಷವಾದುದು. ಈ ಕಾರಣಕ್ಕಾಗಿಯೇ ಇಂದಿಗೂ ಆಟಿ ತಿಂಗಳು ಮಹತ್ವ ಪಡೆದಿವೆ ಎಂದರು.
ಭಾರತ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ತುಳುನಾಡಿನ ಹೆಮ್ಮೆಯ ಅಧಿಕಾರಿ ರಕ್ಷಣಾ ಸಚಿವಾಲಯ ಭಾರತ ಸರ್ಕಾರ ಜಂಟಿ ನಿಯಂತ್ರಕರಾದ ಡಾ. ಅಕ್ಷತಾ ಎ. ರಾವ್ ಐಡಿಎಎಸ್ ನಮ್ಮ ನೆಲದ ಸಂಸ್ಕೃತಿ, ಆಹಾರ ಪದ್ದತಿ ವೈವಿಧ್ಯಮಯ ಹಾಗೂ ಸತ್ವಯುತವಾಗಿದೆ ಎಂಬುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ರಾಷ್ಟç ರಾಜಧಾನಿಯಲ್ಲಿ ತುಳುನಾಡಿನ ಮಣ್ಣಿನ ಕಂಪನ್ನು ಪಸರಿಸುತ್ತಿರುವ ದೆಹಲಿ ತುಳುಸಿರಿಯ ಕಾರ್ಯ ಅನುಕರಣೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದೆಹಲಿ ತುಳುಸಿರಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು , ನಮ್ಮ ಹಿರಿಯರ ಬದುಕಿನ ಗುರುತನ್ನು ಯುವಪೀಳಿಗೆಗೆ ತೆರೆದಿಡುವ ಆಶಯವನ್ನು ಹೊತ್ತು ಈ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದೀಚೆಗೆ ಆಯೋಜಿಸಲಾಗುತ್ತಿದೆ. ದಿಲ್ಲಿಯಲ್ಲೂ ನಮ್ಮ ಹಳ್ಳಿಯ ಸೊಗಡನ್ನು ಬಿತ್ತರಿಸುವಲ್ಲಿ ದೆಹಲಿ ತುಳುಸಿರಿ ನಿರಂತರವಾಗಿ ಶ್ರಮಿಸುತ್ತಿದೆ. ಕರ್ನಾಟಕ ರಾಜ್ಯ ಸರಕಾರವು ತುಳು ಭಾಷೆಯನ್ನು ಅಧಿಕೃತ ಭಾಷೆಯೆಂದು ಮಾನ್ಯತೆಗೊಳಿಸಬೇಕು. ತದನಂತರ ದೆಹಲಿಯಲ್ಲಿರುವ ಕರಾವಳಿಯ ಉನ್ನತ ಅಧಿಕಾರಿಗಳ, ಜನಪ್ರತಿನಿಧಿಗಳ ಜೊತೆಗೂಡಿ ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಯ ಹೋರಾಟಕ್ಕೆ ಮರುಚಾಲನೆ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಆಟಿಯ ಊಟದಲ್ಲಿ 38 ಬಗೆ
ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸುವ ಪತ್ರೊಡೆ, ಹಲಸಿನ ಗಟ್ಟಿ, ಕಣಿಲೆ ಹೆಸರುಕಾಳು ಗಸಿ, ಕೊಟ್ಟಿಗೆ, ಅರಸಿನ ಗಟ್ಟಿ, ತಿಮರೆ ಚಟ್ನಿ, ನೀರು ಮಾವಿನಕಾಯಿ ಚಟ್ನಿ, ಮೆಂತೆ ಗಂಜಿ ಹೀಗೆ ೩೮ ಬಗೆಯ ಸವಿರುಚಿಯ ಖಾದ್ಯಗಳನ್ನು ದೆಹಲಿ ಹಾಗೂ ಎನ್ಸಿಆರ್ ತುಳುವರು ತಮ್ಮತಮ್ಮ ಮನೆಯಲ್ಲಿಯೇ ತಯಾರಿಸಿ ಸುಮಾರು ೨೫೦ ಜನರಿಗೆ ಉಣಬಡಿಸಿದರು.
ವೇದಿಕೆಯನ್ನು ಹಸಿರು ತೋರಣದ ಸಾಂಪ್ರದಾಯಿಕ ಶೈಲಿಯಲ್ಲಿ ಸಿಂಗರಿಸಲಾಗಿತ್ತು. ತುಳುನಾಡಿನ ಸಾಂಪ್ರದಾಯಿಕ ಜನಜೀವನದ ಹಿರಿಮೆಯನ್ನು ನೆನಪಿಸುವ ಹಳೆಯ ಪರಿಕರಗಳ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು. ಗಣ್ಯರಿಗೆ ವೀಳ್ಯದೆಲೆ, ಅಡಿಕೆ ನೀಡಿ ಸ್ವಾಗತಿಸಲಾಯಿತು. ಕು. ವೈಷ್ಣವಿ ತುಳು ಜನಪದ ನೃತ್ಯವನ್ನು, ಮೋಹನ್ದಾಸ್, ಮೆಲ್ವಿನ್ ಜಿ. ಲೋಬೊ ಮತ್ತು ಬಳಗ ತುಳು ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಮೂರು ವಿಭಾಗಗಳಲ್ಲಿ ಕರಾವಳಿಯ ಜನಪದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ದೆಹಲಿ, ನೊಯ್ಡಾ, ಗುರುಗಾಂವ್ನ ತುಳುವರು ಹಾಗೂ ಗಣ್ಯರು ಉಪಸ್ಥಿತರಿದ್ದರು. ದೆಹಲಿ ತುಳುಸಿರಿಯ ಕಾರ್ಯದರ್ಶಿ ಅರವಿಂದ ಬಿಜೈ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕೃಷ್ಣರಾಜ್ ವಂದಿಸಿದರು. ಖಜಾಂಚಿ ನಾಗರಾಜ್ ಎಂ. ಅತಿಥಿ ಪರಿಚಯಗೈದರು. ಜೊತೆ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಉಳೆಪಾಡಿ, ಸದಸ್ಯೆ ಶ್ರೀಮತಿ ಅಶ್ವಿತಾ ಮಿಥೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ಕುಶಾಲಪ್ಪ, ರವಿ ಮೂಡಬಿದಿರೆ ಕಾರ್ಯಕ್ರಮ ನಿರ್ವಹಿಸಿದರು.