ಮುಂಬೈ, ಆ. 12 (DaijiworldNews/TA): ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಸುರಿದ ಭಾರಿ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ನಾಲ್ಕರಿಂದ ಐದು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಘಾಟ್ಕೋಪರ್ನ ಚಿರಾಗ್ ನಗರದಲ್ಲಿರುವ ಗೌಸಿಯಾ ಚಾಲ್ ಬಳಿ ಮುಂಜಾನೆ ಸುಮಾರು 3:48ಕ್ಕೆ ಗುಡ್ಡದ ಒಂದು ಭಾಗ ಕುಸಿದು ಬಿದ್ದಿದೆ. ಗುಡ್ಡದ ಮಣ್ಣು ಮತ್ತು ಬಂಡೆಗಳು 2ರಿಂದ 3 ಮನೆಗಳ ಮೇಲೆ ಬಿದ್ದ ಪರಿಣಾಮ ನಿವಾಸಿಗಳು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಈವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ 18 ವರ್ಷದ ಸೊಹೇಲ್ ಅನ್ಸಾರಿ ಹಾಗೂ 14 ವರ್ಷದ ಮೊಹಮ್ಮದ್ ಅನ್ಸಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿಯೂ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ NDRF, ಮುಂಬೈ ಅಗ್ನಿಶಾಮಕ ದಳ, ಪೊಲೀಸರು ಹಾಗೂ BMC ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಣ್ಣಿನಡಿ ಸಿಲುಕಿರುವವರಿಗಾಗಿ ಜೆಸಿಬಿ ಸೇರಿದಂತೆ ವಿವಿಧ ಉಪಕರಣಗಳ ನೆರವಿನಿಂದ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಗಣೇಶ್ ಶಿಂಧೆ ಸೇರಿದಂತೆ ಹಿರಿಯ ಪೊಲೀಸ್ ಹಾಗೂ ಬಿಎಂಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಇನ್ನೂ ಮೂರರಿಂದ ನಾಲ್ಕು ಮಂದಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ಡಿಸಿಪಿ ಗಣೇಶ್ ಶಿಂಧೆ ತಿಳಿಸಿದ್ದಾರೆ. ಈ ನಡುವೆ, ಮುಂಬೈ ಮೇಯರ್ ರಿತು ತಾವ್ಡೆ ಹಾಗೂ ಹೆಚ್ಚುವರಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಧಾಕ್ನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಪಾಯಕಾರಿ ಪ್ರದೇಶಗಳಲ್ಲಿರುವ ನಿವಾಸಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ.