ನವದೆಹಲಿ, ಆ. 12 (DaijiworldNews/AA): ವಿರೋಧ ಪಕ್ಷಕ್ಕೆ ಗೃಹ ಸಚಿವರಿಂದ ಉಪದೇಶ ಅಥವಾ ಉಪನ್ಯಾಸ ಕೇಳುವ ಆಸಕ್ತಿಯಿಲ್ಲ ಎಂದು ಸಂಸತ್ನಲ್ಲಿ ಚರ್ಚೆಗೆ ಸಿದ್ಧ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಸಂಸತ್ತಿನ ಸಂಕೀರ್ಣದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಮಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಉತ್ತರಗಳು ಬೇಕಾಗಿವೆ. ಅವರು ಏನು ಹೇಳುತ್ತಾರೆ ಎಂಬ ಬಗ್ಗೆ ನಮಗೆ ಯೋಚನೆಯಿಲ್ಲ" ಎಂದು ಹೇಳಿದರು.
"ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಲು ಮತ್ತು ಲಾಠಿಚಾರ್ಜ್ ಮಾಡಲು ಆದೇಶ ನೀಡಿದ್ದು ಯಾರು? ಒಂದು ವೇಳೆ ಅಮಿತ್ ಶಾ ಅವರೇ ಈ ಆದೇಶ ನೀಡಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು. ಕಳೆದ 20 ದಿನಗಳಿಂದ ಗೃಹ ಸಚಿವರು ಸಂಸತ್ತಿಗೆ ಬಾರದೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ" ಎಂದರು.