ನವದೆಹಲಿ, ಆ. 12 (DaijiworldNews/AA): ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಬೃಹತ್ ಪ್ರಮಾಣದ ನಗದು ಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿದ್ದ ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ ಮೂರೂ ಆರೋಪಗಳು ಸಾಬೀತಾಗಿವೆ ಎಂದು ಸಂಸದೀಯ ತನಿಖಾ ಸಮಿತಿ ವರದಿ ನೀಡಿದೆ.

ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದ ಸ್ಟೋರ್ರೂಮ್ನಲ್ಲಿ ಕಳೆದ ವರ್ಷ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು. ಹಣದ ಮೂಲದ ಬಗ್ಗೆ ಅವರು ತೃಪ್ತಿಕರ ಉತ್ತರ ನೀಡಲು ವಿಫಲರಾಗಿದ್ದಾರೆ. ಬೆಂಕಿ ನಂದಿಸಿದ ನಂತರ ಘಟನಾ ಸ್ಥಳ ಮತ್ತು ಸಾಕ್ಷ್ಯಾಧಾರಗಳನ್ನು ಸೂಕ್ತವಾಗಿ ಸಂರಕ್ಷಿಸದೆ ಸಾಕ್ಷ್ಯ ನಾಶ ಮಾಡಲಾಗಿದೆ. ನೀಡಿದ ವಿವರಣೆಗಳು ಅಪೂರ್ಣ ಹಾಗೂ ದಾರಿ ತಪ್ಪಿಸುವಂತಿದ್ದವು. ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.
ದೆಹಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಸರ್ಕಾರಿ ನಿವಾಸದ ಸ್ಟೋರ್ರೂಮ್ನಲ್ಲಿ 2025ರ ಮಾರ್ಚ್ 14-15ರ ಮಧ್ಯರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆ ವೇಳೆ ಯಶವಂತ್ ವರ್ಮಾ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಅವರ ಮನೆಯ ಸದಸ್ಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವೇಳೆ ಆ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸ್ಟೋರ್ರೂಮ್ನಲ್ಲಿ ಅರ್ಧ ಸುಟ್ಟ, ಒದ್ದೆಯಾದ ಹಾಗೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಪಾರ ಪ್ರಮಾಣದ 500 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳು ಕಂಡುಬಂದಿದ್ದವು.
ಆ ವೇಳೆ ನೋಟುಗಳನ್ನು ಸ್ಥಳದಲ್ಲೇ ವಶಪಡಿಸಿಕೊಳ್ಳಲಿಲ್ಲ, ಎಣಿಕೆ ಮಾಡಲಿಲ್ಲ ಅಥವಾ ಪಟ್ಟಿಯನ್ನು ಸಿದ್ಧಪಡಿಸಲಿಲ್ಲ. ಹೀಗಾಗಿ ಪತ್ತೆಯಾದ ಹಣದ ನಿಖರ ಮೊತ್ತವನ್ನು ವರದಿಯಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಸಮಿತಿ ತಿಳಿಸಿದೆ. ಆದರೆ, ಅಲ್ಲಿ ಭಾರಿ ಪ್ರಮಾಣದ 500 ರೂ. ಮುಖಬೆಲೆಯ ನೋಟುಗಳಿದ್ದವು ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ಸಮಿತಿ ಸ್ಪಷ್ಟನೆ ನೀಡಿದೆ.