ಬೆಂಗಳೂರು, ಆ. 12 (DaijiworldNews/AA): ನಾಳೆಯಿಂದ(ಆಗಸ್ಟ್ 13) ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ರಾಜ್ಯ ಸರ್ಕಾರದ ವಿರುದ್ಧ ಜಿದ್ದಾಜಿದ್ದಿಗೆ ಪ್ರತಿಪಕ್ಷಗಳು ಅಸ್ತ್ರಗಳನ್ನು ತಯಾರಿ ಮಾಡಿಕೊಂಡಿವೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಹಾಗೂ ಅವರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.

ನೂತನ ಸಚಿವರಿಗೆ ಹಂಚಿಕೆಯಾದ ಖಾತೆ ವಿಚಾರ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ರೈತರ ಸಮಸ್ಯೆ, ಕಾವೇರಿ ನೀರು, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಹಲವು ಪ್ರಮುಖ ಅಸ್ತ್ರಗಳನ್ನು ವಿಪಕ್ಷಗಳು ಸಿದ್ಧ ಮಾಡಿಕೊಂಡಿವೆ. ವಿಪಕ್ಷಗಳ ಆರೋಪಗಳಿಗೆ ಕಾಂಗ್ರೆಸ್ ಸರ್ಕಾರ ತನ್ನ ಸಾಧನೆಗಳನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಲು ಸಿದ್ಧವಾಗಿದೆ.
ಕೆಪಿಎಸ್ಸಿ ಪರೀಕ್ಷಾ ಅಕ್ರಮ, ಪೊಲೀಸ್ ಪರೀಕ್ಷೆಯ ಗೊಂದಲ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರ, ಭ್ರಷ್ಟಾಚಾರದ ಆರೋಪ, ಗೊಬ್ಬರ, ಬರಗಾರ, ಬೆಳೆನಾಶ ಸೇರಿ ರೈತರ ಹಲವು ಸಮಸ್ಯೆ ಬಗ್ಗೆ ಚರ್ಚೆ, ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವ ಕುರಿತು, ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾಮಗಾರಿ ಕುಂಟಿತ, ಅನುದಾನ ಬಿಡುಗಡೆ ವಿಚಾರದಲ್ಲಿ ಸ್ವಜನಪಕ್ಷಪಾತ, ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿನ ಗೊಂದಲ, ಇಲಾಖೆಗಳ ಹಂಚಿಕೆ ಹಾಗೂ ಸರ್ಕಾರದ ಒಳಗಿನ ರಾಜಕೀಯ ಬೆಳವಣಿಗೆಗಳ ಕುರಿತು ಅಧಿವೇಶನದಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸುವ ನಿರೀಕ್ಷೆಯಿದೆ.