ನವದೆಹಲಿ, ಆ. 13 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 12 ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಅಕ್ಷಿತ್ ಭಾರದ್ವಾಜ್ ಅವರ ಯಶೋಗಾಥೆ ಇದು.

2002ರ ಸೆಪ್ಟೆಂಬರ್ 4ರಂದು ಜನಿಸಿದ ಅಕ್ಷಿತ್ ಭಾರದ್ವಾಜ್ ದೆಹಲಿ ನಿವಾಸಿ. ಭಾರತದ ಪ್ರತಿಷ್ಠಿತ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಟಿ ದೆಹಲಿಯಲ್ಲಿ ಅವರು ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದಾರೆ. ಅನೇಕ ಐಐಟಿ ಪದವೀಧರರಂತೆ ಅಕ್ಷಿತ್ ಅವರ ಮುಂದೆಯೂ ಹಲವು ಉತ್ತಮ ವೃತ್ತಿ ಅವಕಾಶಗಳಿದ್ದವು. ಆದರೆ ಅಕ್ಷಿತ್ ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ದೇಶ ಸೇವೆ ಮಾಡುವ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಅವರು ನಿರ್ಧರಿಸಿದರು.
ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಕ್ಷಿತ್ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಪ್ರಯತ್ನ ಕೈಬಿಡದೆ ಅವರು ತಮ್ಮ ಸಿದ್ಧತಾ ಕಾರ್ಯತಂತ್ರದಲ್ಲಿ ಸುಧಾರಣೆ ಮಾಡಿಕೊಂಡರು. ಅಧ್ಯಯನ ವಿಧಾನದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರು ಮತ್ತು ತಮ್ಮ ಐಚ್ಛಿಕ ವಿಷಯವನ್ನೂ ಬದಲಾಯಿಸಿದರು. ಅಕ್ಷಿತ್ ಅವರ ನಿರಂತರ ಪ್ರಯತ್ನಕ್ಕೆ ಫಲವಾಗಿ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 12ನೇ ಅಖಿಲ ಭಾರತ ರ್ಯಾಂಕ್ ಗಳಿಸಿದರು. ಈ ಮೂಲಕ ಅವರು ದೇಶಾದ್ಯಂತ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಸಂಖ್ಯಾತ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.