ಬೆಂಗಳೂರು, ಆ. 13 (DaijiworldNews/TA): ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್ನಲ್ಲಿ ಮೊಬೈಲ್ ಫೋನ್, ಪೆನ್ಡ್ರೈವ್, ಚಾರ್ಜರ್ ಹಾಗೂ ನೋಟ್ಬುಕ್ ಪತ್ತೆಯಾಗಿರುವ ಪ್ರಕರಣ ಇದೀಗ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

AI PIC
ಅಕ್ರಮ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಹಾಗೂ ಸಹ ಕೈದಿ ಪ್ರತಾಪ್ ರಾಯ್ ಇದ್ದ ಸೆಲ್ನಲ್ಲಿ ಮೊಬೈಲ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಪತ್ತೆಯಾದ ಪೆನ್ಡ್ರೈವ್ನಲ್ಲಿ 70ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಇದ್ದವು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅಲ್ಲದೆ, ಪ್ರಜ್ವಲ್ ರೇವಣ್ಣ ಅವರ ಸೆಲ್ನಲ್ಲಿ ಪತ್ರಿಕೆಗಳಿಂದ ಕತ್ತರಿಸಲಾದ ನಟಿಯರು ಹಾಗೂ ರೂಪದರ್ಶಿಗಳ ಅರೆನಗ್ನ ಚಿತ್ರಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ. ಮೊಬೈಲ್ ಪರಿಶೀಲನೆ ವೇಳೆ ಸಾಮಾಜಿಕ ಜಾಲತಾಣಗಳ ಆ್ಯಪ್ಗಳು ಡೌನ್ಲೋಡ್ ಆಗಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಜೈಲಿನಲ್ಲಿದ್ದ ಟಿವಿಗೆ ಪೆನ್ಡ್ರೈವ್ ಸಂಪರ್ಕಿಸಿ ಚಲನಚಿತ್ರ ವೀಕ್ಷಿಸಿದ್ದಾಗಿ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರಾಯ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಮೊಬೈಲ್, ಪೆನ್ಡ್ರೈವ್ ಹಾಗೂ ಇತರ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಸಿಬಿ ಮಾದಕ ವಸ್ತು ದ್ರವ್ಯ ನಿಗ್ರಹ ದಳದ ಇನ್ಸ್ಪೆಕ್ಟರ್ ಎಂ.ಎಲ್. ಸುಬ್ರಹ್ಮಣ್ಯ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ಭದ್ರತಾ ವಿಭಾಗದಿಂದ ಸಾಮಾನ್ಯ ಕೈದಿಗಳ ಬ್ಯಾರಕ್ಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.
ಜೈಲು ಸಿಬ್ಬಂದಿ ನೆರವಿನ ಶಂಕೆ? : ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನೊಳಗೆ ಮೊಬೈಲ್ ತಲುಪಲು ಕೆಲ ಜೈಲು ಸಿಬ್ಬಂದಿ ನೆರವು ನೀಡಿರಬಹುದೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳಿಗೆ ಶಂಕೆ ವ್ಯಕ್ತವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸಿಬ್ಬಂದಿಯ ಮೂಲಕವೇ ಮೊಬೈಲ್ ಸೆಲ್ಗೆ ಹೋಗಿ ಬರುತ್ತಿತ್ತು ಎಂಬ ಆರೋಪಗಳೂ ಕೇಳಿಬಂದಿವೆ.
ಈ ಹಿಂದೆ ನಡೆದ ತಪಾಸಣೆಯಲ್ಲಿ ಮೊಬೈಲ್ ಪತ್ತೆಯಾಗದಿರುವುದಕ್ಕೂ ಇದೇ ಕಾರಣವಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಪ್ರಸ್ತುತ ಮೊಬೈಲ್ ಹಾಗೂ ಪೆನ್ಡ್ರೈವ್ ಜೈಲಿನೊಳಗೆ ಹೇಗೆ ತಲುಪಿತು, ಅವುಗಳನ್ನು ಯಾರು ಒದಗಿಸಿದರು ಮತ್ತು ಅವುಗಳನ್ನು ಹೇಗೆ ಬಳಸಲಾಗುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.