ಬೆಂಗಳೂರು, ಆ. 14 (DaijiworldNews/AA): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಜನರು ವಿವಿಧ ರೀತಿಯಲ್ಲಿ ಏನೇ ತೀರ್ಮಾನ ಮಾಡಿದ್ದರೂ ನಾವು ಒಪ್ಪಬೇಕು. ಆದರೆ ಈಗ ನನಗೆ ಸಿಕ್ಕಿರುವ ಅವಕಾಶದಲ್ಲಿ 224 ಶಾಸಕರೂ ನನ್ನ ದೃಷ್ಟಿಯಲ್ಲಿ ಒಂದೇ. ನಾನು ಈ ಸ್ಥಾನದಲ್ಲಿ ಕೂತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ವಿಧಾನಸಭೆಯಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ಸದನಕ್ಕೆ ಪರಿಚಯಿಸಿ ಮಾತನಾಡಿದ ಅವರು, "ಜೂನ್ 3ರಂದು ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚರ್ಚೆ ಮಾಡಿ 139 ಶಾಸಕರ ಬೆಂಬಲದೊಂದಿಗೆ ನನ್ಮನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ಈ ಹಿಂದೆ ಅನೇಕ ನಾಯಕರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಕಳೆದ ೩ ವರ್ಷಗಳಿಂದ ಸಿದ್ದರಾಮಯ್ಯ ಅವರು ಸಿಎಂ ಆಗಿ ನಾನು ಡಿಸಿಎಂ ಆಗಿ ಕೆಲಸ ಮಾಡಿದ್ದೆವು. ಇದು ಅದರ ಮುಂದುವರಿದ ಸರ್ಕಾರ" ಎಂದರು.
"ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಆಲೋಚನೆಗಳಿರುತ್ತವೆ. ಹೊಸ ಆಲೋಚನೆ, ಭರವಸೆ, ನಂಬಿಕೆ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ನಮ್ಮ ಶಾಸಕರು, ವಿರೋಧ ಪಕ್ಷದ ಶಾಸಕರು, ನಾಯಕರು, ನಮ್ಮ ಸಚಿವ ಸಂಪುಟದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು" ಕರೆ ನೀಡಿದರು.