ಬೆಂಗಳೂರು,ಆ. 14 (DaijiworldNews/AK): ಕಾಂಗ್ರೆಸ್ ಸರಕಾರ ಮತ್ತು ರಾಜ್ಯದ ಮುಖ್ಯಮಂತ್ರಿಗಳು ರೈತರು ಮತ್ತು ಅಡಿಕೆ ಬೆಳೆಗಾರರ ಮೇಲೆ ಗದಾಪ್ರಹಾರ ಮಾಡುವ ಪ್ರಯತ್ನ ಅಥವಾ ಷಡ್ಯಂತ್ರ ಮಾಡುತ್ತಿರುವ ಗುಮಾನಿ ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ವಿಧಾನಸೌಧದ ಬಿಜೆಪಿ ಕಚೇರಿ ಸಂಖ್ಯೆ 101ರಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕರಾವಳಿ, ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುತ್ತಾರೆ. ಇಡೀ ದೇಶದಲ್ಲಿ ಸುಮಾರು 9 ಲಕ್ಷದ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಈ ಪೈಕಿ ಕರ್ನಾಟಕದಲ್ಲಿ 6 ಲಕ್ಷ 76 ಸಾವಿರದ 940 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಾರೆ ಎಂದು ಗಮನ ಸೆಳೆದರು.
ಕರ್ನಾಟಕದಲ್ಲಿ ಈ ಬೆಳೆಯನ್ನು ಶೇ 76ರಷ್ಟು ಬೆಳೆಯಲಾಗುತ್ತದೆ ಎಂದು ತಿಳಿಸಿದರು.
ಇದೆಲ್ಲ ಮಾಹಿತಿ ಇದ್ದರೂ ಗುಟ್ಕಾ ನಿಷೇಧ ಮಾಡುವುದಾಗಿ ಹಾವು ಬಿಡುವ ಕೆಲಸ ಸರಕಾರದಿಂದ ಆಗಿದೆ ಎಂದು ಟೀಕಿಸಿದರು. ಅಡಿಕೆ ಬೆಳೆಗಾರರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕ್ಯಾಂಪ್ಕೋ, ಇತರ ಸಂಘಗಳ ನಿಯೋಗ ಬರಲಿದ್ದು, ಸೋಮವಾರ ಅಥವಾ ಮಂಗಳವಾರ ಸಭೆ ನಿಗದಿ ಮಾಡಲು ಕೋರಿದ್ದೇನೆ ಎಂದು ಹೇಳಿದರು.
ಸೋಮವಾರ ಅಥವಾ ಮಂಗಳವಾರ ಭೇಟಿ ಮಾಡಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗುವಂಥ ನಿರ್ಧಾರವನ್ನು ಸರಕಾರ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.
ಅಡಿಕೆ ಬೆಲೆ ಕುಸಿತಕ್ಕೆ ಕಾರಣವಾದ ಅಧಿಸೂಚನೆ
ಮಾಜಿ ಗೃಹ ಸಚಿವ ಮತ್ತು ಶಾಸಕ ಅರಗ ಜ್ಞಾನೇಂದ್ರ ಅವರು ಮಾತನಾಡಿ, 145 ತಾಲ್ಲೂಕುಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. 10 ಲಕ್ಷಕ್ಕಿಂತ ಹೆಚ್ಚು ರೈತ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿದೆ ಎಂದು ವಿವರಿಸಿದರು. ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ ಕುರಿತ ಅಧಿಸೂಚನೆಯಿಂದ ಅಡಿಕೆ ಬೆಲೆ ಕುಸಿದಿದೆ ಎಂದು ಹೇಳಿದರು.