ಭುವನೇಶ್ವರ,ಆ. 14 (DaijiworldNews/AK): ಇಂಡಿಗೋ ವಿಮಾನ ರದ್ದಾಗಿದ್ದಕ್ಕೆ ಸಿಟ್ಟಿಗೆದ್ದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ ಜೊತೆ ಜಗಳ ಮಾಡಿದ ಘಟನೆ ಭುವನೇಶ್ವರ ಏರ್ಪೋರ್ಟ್ನಲ್ಲಿ ನಡೆದಿದೆ. ಮಹಿಳೆ ಕಿರುಚಾಡಿ ಗಲಾಟೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಲಗೇಜ್ ಬೆಲ್ಟ್ ಮೇಲೇರಿ ಸಿಬ್ಬಂದಿಯ ಟೇಬಲ್ ಮೇಲಿದ್ದ ಕಾಗದಗಳು ಮತ್ತು ದಾಖಲೆಗಳನ್ನು ಎಸೆದು ಕೂಗಾಡಿರಿವುದು ಸೆರೆಯಾಗಿದೆ. ಸಿಬ್ಬಂದಿ ಹಾಗೂ ಕೆಲವು ಪ್ರಯಾಣಿಕರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ ಮಹಿಳೆ ತೀವ್ರ ಅಸಮಾಧಾನಗೊಂಡಿದ್ದು ವಾಗ್ವಾದ ಮುಂದುವರಿಸಿದ್ದರು.
ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಸಿಐಎಸ್ಎಫ್ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಭದ್ರತಾ ಸಿಬ್ಬಂದಿ ಆಕೆಗೆ, ನೀವು ವಿಮಾನ ನಿಲ್ದಾಣದ ಆಸ್ತಿಗೆ ಹಾನಿ ಮಾಡುತ್ತಿದ್ದೀರಿ. ಮತ್ತೆ ಅಲ್ಲಿಗೆ ಹೋಗಬೇಡಿ ಎಂದು ಮನವರಿಕೆ ಮಾಡಿದರು. ಈ ಸಮಯದಲ್ಲಿ ಪ್ರಯಾಣಿಕರೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ಭದ್ರತಾ ಸಿಬ್ಬಂದಿಗೆ ವಿವರಿಸುತ್ತಾ, “ಇಂಕಾ ಬಚ್ಚಾ ಬಿಮಾರ್ ಹೈ” (ಆಕೆಯ ಮಗು ಅಸ್ವಸ್ಥವಾಗಿದೆ) ಎಂದಿದ್ದಾರೆ.
ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ರದ್ದಾಗಿತ್ತು. ಹಲವಾರು ಗಂಟೆಗಳ ಕಾಲ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾದಿದ್ದರು. ಕೆಲವರು ರದ್ದತಿಯ ಬಗ್ಗೆ ತಮಗೆ ಸರಿಯಾದ ಸಮಯದಲ್ಲಿ ತಿಳಿಸಿಲ್ಲ ಎಂದು ಆರೋಪಿಸಿದ್ದಾರೆ. ಇದರ ನಡುವೆ ಮಹಿಳೆ ಇಂಡಿಗೋ ವಿಮಾನದ ಸಿಬ್ಬಂದಿ ವಿರುದ್ಧ ಗಲಾಟೆ ಮಾಡಿದ್ದಾರೆ.