ಶ್ರೀನಗರ, ಆ. 14 (DaijiworldNews/AA): ಪಾಕಿಸ್ತಾನವು ಭಾರತೀಯರ ರಕ್ತವನ್ನು ಹೀರಿಬಿಟ್ಟಿದೆ. ಸಿಂಧೂ ಜಲ ಒಪ್ಪಂದವು ಈಗ ರದ್ದಾಗಿದ್ದು, ಇನ್ಮುಂದೆ ರದ್ದಾಗಿಯೇ ಉಳಿಯಬೇಕು. ಆಗ ಮಾತ್ರ ನಾವು ನಮ್ಮ ಜಲಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.

"ಸಿಂಧೂ ಜಲ ಒಪ್ಪಂದದ ಮೂಲಕ ನಮ್ಮ ರಕ್ತವನ್ನು ಸಂಪೂರ್ಣವಾಗಿ ಹೀರಲಾಗಿದೆ ಎಂದು ನಾವು ಯಾವಾಗಲೂ ಹೇಳುತ್ತಲೇ ಬಂದಿದ್ದೇವೆ. ಇವು ನಮ್ಮ ನದಿಗಳು. ಇವುಗಳ ಮೇಲೆ ಮೊದಲ ಹಕ್ಕು ನಮ್ಮದೇ ಎಂಬುದು ಸಾರ್ವಕಾಲಿಕ ಸತ್ಯ" ಎಂದು ಹೇಳಿದರು.
"ಪಾಕಿಸ್ತಾನವು ಆಗಾಗ ತನ್ನನ್ನು ಕಾಶ್ಮೀರದ ಜನರ ದೊಡ್ಡ ಹಿತೈಷಿ ಎಂದು ಹೇಳಿಕೊಳ್ಳುತ್ತದೆ. ಆದರೆ ನೀರಿನ ವಿಚಾರ ಬಂದಾಗ ಆ ಕಾಳಜಿ ಎಲ್ಲಿ ಮಾಯವಾಗುತ್ತದೆ? ನಮ್ಮದೇ ನದಿಗಳನ್ನು ಬಳಸುವ ನಮ್ಮ ಹಕ್ಕನ್ನು ಕಸಿದುಕೊಂಡಾಗ ಅವರ ಕಾಳಜಿ ಎಲ್ಲಿಗೆ ಹೋಗಿತ್ತು?" ಎಂದು ಪ್ರಶ್ನೆ ಮಾಡಿದರು.
"ಗಡಿಯಲ್ಲಿರುವ ಒಟ್ಟು 6 ನದಿಗಳಲ್ಲಿ ಪಂಜಾಬ್ ಮೂಲಕ ಹರಿಯುವ 3 ನದಿಗಳನ್ನು ಭಾರತ ತನ್ನ ಬಳಿ ಇಟ್ಟುಕೊಂಡರೆ, ಉಳಿದ 3 ನದಿಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಯಿತು. ಆದರೂ ಪಾಕಿಸ್ತಾನಕ್ಕೆ ಸಮಾಧಾನವಿಲ್ಲ. ಅಂದಿನಿಂದ ನಾವು ಸಿಂಧೂ ನದಿ ನೀರು ಒಪ್ಪಂದದ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ನಮಗೆ ಚೀನಾಬ್ ನದಿಯಿಂದ ಕುಡಿಯುವ ನೀರನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ತುಲ್ಬುಲ್ನಲ್ಲಿ ಬ್ಯಾರೇಜ್ ನಿರ್ಮಿಸಲು ಮತ್ತು ನೀರಾವರಿಗಾಗಿ ಜೇಲಂ ನದಿಯನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ" ಅಭಿಪ್ರಾಯ ವ್ಯಕ್ತಪಡಿಸಿದರು.
"ನೀರನ್ನು ಸಂಗ್ರಹಿಸಲು ಮತ್ತು ನಿಯಂತ್ರಿಸಲು ನಮ್ಮ ಯಾವುದೇ ನದಿಗಳ ಮೇಲೆ ದೊಡ್ಡ ಆಣೆಕಟ್ಟು ನಿರ್ಮಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ಇದನ್ನು 'ರಕ್ತದ ಹನಿ' ಎಂದು ಕರೆದಿರುವುದು ಒಳ್ಳೆಯದೇ ಆಯಿತು. ಅವರು ಹೇಳಿದ್ದು ಸರಿಯಾಗಿದೆ. ಈ ನೀರು ನಮ್ಮ ರಕ್ತ. ನಮ್ಮ ರಕ್ತವನ್ನು ಹೀರಲಾಗಿದೆ. ಈಗ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ನಮ್ಮ ಜಲಸಂಪನ್ಮೂಲಗಳನ್ನು ನಾವು ಸರಿಯಾಗಿ ಬಳಸಿಕೊಳ್ಳಲು ಇದು ರದ್ದಾಗಿಯೇ ಉಳಿಯಬೇಕು" ಎಂದು ಒತ್ತಾಯಿಸಿದರು.
"ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಅರ್ಹತೆಯನ್ನು ಪುನಃಸ್ಥಾಪಿಸಬೇಕೆಂಬ ತಮ್ಮ ಬೇಡಿಕೆಯನ್ನು ಒಮರ್ ಅಬ್ದುಲ್ಲಾ ಪುನರುಚ್ಚರಿಸಿದ್ದು, ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆ ಆರಂಭವಷ್ಟೇ. ಇನ್ನು ಮುಂದೆ ಸಾಕಷ್ಟು ಹೋರಾಟಗಳು ಬರಲಿವೆ" ಎಂದರು.