ಬೆಂಗಳೂರು, ಆ. 15 (DaijiworldNews/AA): ಆರ್ಎಸ್ಎಸ್ ಅಥವಾ ಬಿಜೆಪಿಯನ್ನು ನಿಷೇಧಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯವೇ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಳಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯಗೊಳಿಸುವ ಮಸೂದೆ ಕುರಿತಾಗಿ ಮಾತನಾಡಿದ ಅವರು, "ಸರ್ಕಾರಿ ಜಾಗದಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಅಥವಾ ರಸ್ತೆಗಳನ್ನು ಬಳಸಬೇಕಾದರೂ ಅನುಮತಿ ಪಡೆಯುವುದು ಕಡ್ಡಾಯ. ನಾವು ಸಹ ರಸ್ತೆ ಬಳಸುವಾಗ ಅನುಮತಿ ಪಡೆಯುತ್ತೇವೆ. ಸಾರ್ವಜನಿಕ ಸ್ಥಳಗಳ ದುರುಪಯೋಗ ತಡೆಯಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯವೇ ಈ ಮಸೂದೆಯನ್ನು ತರಲಾಗುತ್ತಿದೆ" ಎಂದರು.
“ಬಿಲ್ನಲ್ಲಿ ಎಲ್ಲಿಯೂ ನಿಷೇಧ ಎಂಬ ಪದ ಬಳಸಿಲ್ಲ. ಯಾವುದೇ ಸಂಘ-ಸಂಸ್ಥೆಗಳ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿಲ್ಲ. ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಬೇಕಾದರೂ ಅನುಮತಿ ಬೇಕು. ಹೀಗಿರುವಾಗ ಆರ್ಎಸ್ಎಸ್ ಅಥವಾ ಬಿಜೆಪಿಯನ್ನು ನಿಷೇಧಿಸಿದ್ದೇವೆ ಎಂದು ಯಾರು ಹೇಳಿದರು? ಬಿಲ್ ಅನ್ನು ಯಾರಾದರೂ ಸರಿಯಾಗಿ ಓದಿದ್ದಾರಾ? ಯಾರಾದರೂ ಧ್ವಜ ಹಿಡಿಯುವುದರಿಂದ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಯಾವುದೇ ವಸ್ತುವಿನಿಂದ ಸಮಾಜದಲ್ಲಿ ಪ್ರಚೋದನೆ ಸೃಷ್ಟಿಸಿದರೆ ಅಥವಾ ಪ್ರಚೋದನಕಾರಿ ಎಂದು ದೂರು ಬಂದರೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಂದನೆ ಅಥವಾ ಪ್ರಚೋದನೆ ಇಲ್ಲದಿದ್ದ ಮೇಲೆ ಅವರಿಗೆ ಏಕೆ ಭಯ?” ಎಂದು ಪ್ರಶ್ನಿಸಿದರು.