ಶಿವಮೊಗ್ಗ, ಆ. 15 (DaijiworldNews/AA): ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದ್ದು, ಮೊದಲ ಮತ್ತು 2ನೇ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಲಾ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ ಹಾಗೂ 800 ಕೆಪಿಎಸ್ ಶಾಲೆಗಳ ಸ್ಥಾಪನೆ ಕುರಿತು ಹಲವು ಮುಖ್ಯ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದ ಬಹುತೇಕ ಶಾಲೆಗಳಿಗೆ ಪಠ್ಯಪುಸ್ತಕಗಳ ಪೂರೈಕೆ ಪೂರ್ಣಗೊಂಡಿದೆ. ಪ್ರವೇಶಾತಿ ಹೆಚ್ಚು-ಕಡಿಮೆಯಾದ ಕಡೆಗಳಲ್ಲಿ ತಕ್ಷಣವೇ ಪಠ್ಯಪುಸ್ತಕ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದರೊಂದಿಗೆ 1ನೇ ಮತ್ತು 2ನೇ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಸ್ಥಳೀಯವಾಗಿ ಕಳಪೆ ದರ್ಜೆಯ ಶೂಗಳನ್ನು ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಚಿವ ಸಂಪುಟದ ಒಪ್ಪಿಗೆಯೊಂದಿಗೆ ರಾಜ್ಯಮಟ್ಟದಲ್ಲೇ ಟೆಂಡರ್ ಕರೆಯಲಾಗಿದೆ. ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಅಳತೆಯಲ್ಲಿ ವ್ಯತ್ಯಾಸವಿದ್ದರೆ ತಕ್ಷಣವೇ ಬದಲಾಯಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.