ನವದೆಹಲಿ, ಸೆ.10 (DaijiworldNews/AA): 'ವಸುಧೈವ ಕುಟುಂಬಕಂ' ಪರಿಕಲ್ಪನೆ, ಭಾರತದ ತಾತ್ವಿಕ ತಳಹದಿಯಾಗಿದ್ದು, ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಮನೋಭಾವವು, ಭೂಮಿಯಾಚೆಗೆ ಬಾಹ್ಯಾಕಾಶಕ್ಕೆ ತಲುಪಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಫ್ರಾನ್ಸ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಸಂದೇಶ ನೀಡಿದ ಅವರು, "ಶತಮಾನಗಳಿಂದ, ಬಾಹ್ಯಾಕಾಶ, ಜನರ ಕಲ್ಪನೆಗೆ ಸ್ಫೂರ್ತಿ ನೀಡುತ್ತಾ ಬಂದಿದೆ. ಹವಾಮಾನ ಮತ್ತು ಕೃಷಿಯಿಂದ ಹಿಡಿದು, ಸಾಗರಗಳು ಮತ್ತು ಸಮುದಾಯಗಳವರೆಗೆ, ಭೂಮಿಯ ಮೇಲಿನ ಜೀವನವನ್ನು ರೂಪಿಸುತ್ತಲಿದೆ. ಜನಜೀವನ ಸುಧಾರಿಸುವಲ್ಲಿ, ಬಾಹ್ಯಾಕಾಶ ಪ್ರಗತಿ ಮಹತ್ವದ ಕೊಡುಗೆ ನೀಡುತ್ತಿದೆ. ಭಾರತ, 2035 ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಮತ್ತು 2040 ರ ವೇಳೆಗೆ, ಭಾರತೀಯ ಗಗನಯಾತ್ರಿಯನ್ನು ಚಂದ್ರನಿಗೆ ಕಳುಹಿಸುವ ಗುರಿಯನ್ನು ಹೊಂದಿದೆ" ಎಂದು ಹೇಳಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಸಾಧನೆಯನ್ನು ಶ್ಲಾಘಿಸಿದ ಅವರು, "ತಾಂತ್ರಿಕ ಶ್ರೇಷ್ಠತೆ ಮತ್ತು ಉತ್ಕೃಷ್ಟ ಕಾರ್ಯಾಚರಣೆಗಳಿಗಾಗಿ, ಇಸ್ರೋ ಜಾಗತಿಕ ಮೆಚ್ಚುಗೆಯನ್ನು ಗಳಿಸಿದೆ. 34 ದೇಶಗಳ 430 ಕ್ಕೂ ಹೆಚ್ಚು ಉಪಗ್ರಹಗಳು ಭಾರತೀಯ ರಾಕೆಟ್ಗಳಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿವೆ. ರೈತರು ಮತ್ತು ಮೀನುಗಾರರಿಗೆ ಸಹಾಯ ಮಾಡುವುದರಿಂದ ಹಿಡಿದು, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆಯವರೆಗೆ, ಇಸ್ರೋದ ಸಾಮರ್ಥ್ಯಗಳನ್ನು ಬಳಸಲಾಗುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದೊಂದಿಗೆ, ಫ್ರಾನ್ಸ್ನ ದೀರ್ಘಕಾಲದ ಪಾಲುದಾರಿಕೆಯ ಕುರಿತು ಮಾತನಾಡಿದ ಅವರು, 1960 ರ ದಶಕದಿಂದಲೂ, ಎರಡೂ ದೇಶಗಳು ವಿಶ್ವಾಸಾರ್ಹ ಪಾಲುದಾರರಾಗಿದ್ದಾರೆ. ಸುಸ್ಥಿರ, ಸದೃಢ ಅಂತರಿಕ್ಷ ಅಭಿವೃದ್ಧಿಗಾಗಿ ಸಾಮೂಹಿಕ ಜವಾಬ್ದಾರಿ ನಿಭಾಯಿಸುವುದು ಅತ್ಯಗತ್ಯ. ಬಾಹ್ಯಾಕಾಶ ಸಂಶೋಧನೆಯ ಮುಂದಿನ ಹಂತದಲ್ಲಿ ಭಾರತದೊಂದಿಗೆ ಕೈಜೋಡಿಸುವಂತೆ, ಫ್ರಾನ್ಸ್ ಮತ್ತು ಇತರ ದೇಶಗಳಿಗೆ ಆಹ್ವಾನ ನೀಡಿದರು.