ಬೆಂಗಳೂರು, ಸೆ.10 (DaijiworldNews/AA): ರಾಜ್ಯದ 50 ತಾಲೂಕು ಆಸ್ಪತ್ರೆಗಳಲ್ಲಿ ಶ್ರವಣ-ಮಾತಿನ ಚಿಕಿತ್ಸಾ ಸೇವೆ ಆರಂಭಕ್ಕೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಇನ್ಮುಂದೆ ಕಿವಿ, ಶ್ರವಣ ಹಾಗೂ ಮಾತಿನ ಸಮಸ್ಯೆಗಳಿಗೆ ತಾಲೂಕು ಮಟ್ಟದಲ್ಲೇ ಚಿಕಿತ್ಸೆ ಮತ್ತು ಪರೀಕ್ಷೆ ಲಭ್ಯವಾಗಲಿದೆ. 50 ತಾಲೂಕಿನ ಪ್ರತಿ ಆಸ್ಪತ್ರೆಗೆ ಸುಮಾರು 40.78 ಲಕ್ಷ ಮೌಲ್ಯದ ಆಡಿಯಾಲಜಿ ಉಪಕರಣಗಳ ಖರೀದಿಗೆ ಸರ್ಕಾರ ಅನುಮೋದನೆ ನೀಡಿದೆ.
50 ಆಸ್ಪತ್ರೆಗಳಿಗೆ ಉಪಕರಣ ಖರೀದಿಗೆ ಸುಮಾರು 20.39 ಕೋಟಿ ವೆಚ್ಚವಾಗಲಿದೆ. ಪ್ರತಿ ತಾಲೂಕು ಆಸ್ಪತ್ರೆಗೆ ಒಬ್ಬ ಆಡಿಯಾಲಜಿಸ್ಟ್ ನೇಮಕ ಮಾಡಲಾಗುವುದು. ಆಡಿಯಾಲಜಿಸ್ಟ್ಗೆ ತಿಂಗಳಿಗೆ 30,000 ಗೌರವಧನ ನೀಡಲಾಗುವುದು. 50 ಆಡಿಯಾಲಜಿಸ್ಟ್ಗಳಿಗೆ ವಾರ್ಷಿಕ ಸುಮಾರು 1.80 ಕೋಟಿ ವೆಚ್ಚವಾಗಲಿದೆ. ಗ್ರಾಮೀಣ ಭಾಗದ ಜನರಿಗೆ ಕಿವಿ ಮತ್ತು ಶ್ರವಣ ಸಮಸ್ಯೆಗಳಿಗೆ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವ ಅಗತ್ಯ ಕಡಿಮೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕೇಂದ್ರ ಸರ್ಕಾರದ ಆರೋಗ್ಯ ಭಾರತ ಧನ ಸಹಾಯದ ಯೋಜನೆ ಅಡಿಯಲ್ಲಿ ವಿಸ್ತರಿಸಲು ಕ್ರಮಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಔಷಧಿ ನಿಗಮ ಮೂಲಕ ಅಗತ್ಯ ಉಪಕರಣಗಳ ಖರೀದಿ ಮಾಡಲಾಗುವುದು. ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳಂತೆ ಟೆಂಡರ್ ಪ್ರಕ್ರಿಯೆ ಮೂಲಕ ಉಪಕರಣ ಖರೀದಿಗೆ ಸರ್ಕಾರ ಸೂಚನೆ ನೀಡಿದೆ.