ಅಹಮದಾಬಾದ್, ಸೆ.10 (DaijiworldNews/AA): ಲಕ್ನೋದಿಂದ ಸೌದಿ ಅರೇಬಿಯಾದ ದಮ್ಮಾಮ್ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

ವಿಮಾನದಲ್ಲಿ 107 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 113 ಮಂದಿ ವಿಮಾನದಲ್ಲಿದ್ದರು. ವಿಮಾನ ಹಾರಾಟ ನಡೆಸುತ್ತಿದ್ದಾಗ ಟಿಶ್ಯೂ ಪೇಪರ್ ಮೇಲೆ ಬಾಂಬ್ ಎಂದು ಬರೆದಿರುವುದನ್ನು ವಿಮಾನ ಸಿಬ್ಬಂದಿಯೊಬ್ಬರು ಗಮನಿಸಿದ್ದರು. ತಕ್ಷಣವೇ ಪೈಲಟ್ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಅನುಮತಿ ಪಡೆದರು. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ತಪಾಸಣೆಗೆ ಒಳಪಡಿಸಲಾಯಿತು.
ಸ್ಥಳೀಯ ಪೊಲೀಸರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಹಲವು ಏಜೆನ್ಸಿಗಳು ವಿಮಾನ ಮತ್ತು ಲಗೇಜ್ಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡಿವೆ. ತಪಾಸಣೆಯ ನಂತರ ಯಾವುದೇ ಸಂಶಯಾಸ್ಪದ ವಸ್ತುವಾಗಲಿ ಅಥವಾ ಬಾಂಬ್ ಆಗಲಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಿಖರ ಕಾರಣ ಹಾಗೂ ಸಂದೇಶವನ್ನು ಬರೆದವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ತನಿಖೆಯ ಭಾಗವಾಗಿ ವಿಮಾನದಲ್ಲಿದ್ದ ಪ್ರಯಾಣಿಕರಿಂದ ಹಸ್ತಾಕ್ಷರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.