ವಾರಾಣಸಿ, ಸೆ. 11 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 21 ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಶುಭಂ ಸಿಂಗ್ ಅವರ ಯಶೋಗಾಥೆ ಇದು.

ಉತ್ತರ ಪ್ರದೇಶದ ವಾರಾಣಸಿಯವರಾದ ಶುಭಂ ಸಿಂಗ್ ಅವರು ಶಿಕ್ಷಣ ಮತ್ತು ಶಿಸ್ತಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ವಿಜಯ್ ಪ್ರತಾಪ್ ಸಿಂಗ್ ಅವರು ಪಶುವೈದ್ಯರಾಗಿ ಸೇವೆ ಸಲ್ಲಿಸಿದ ಬಳಿಕ ಮುಖ್ಯ ಪಶುವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ತಾಯಿ ಗೃಹಿಣಿ.
ವಾರಾಣಸಿಯಲ್ಲೇ 12ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಶುಭಂ ಸಿಂಗ್ ಅವರು ಐಐಟಿ ಕಾನ್ಪುರದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಬಿಟೆಕ್ ಪದವಿ ಪಡೆದರು. ನಂತರ ವೃತ್ತಿಪರ ಅನುಭವ ಗಳಿಸಿದ ಅವರು, ಅಶೋಕ ವಿಶ್ವವಿದ್ಯಾಲಯದ ಯಂಗ್ ಇಂಡಿಯಾ ಫೆಲೋಶಿಪ್ ಕಾರ್ಯಕ್ರಮದಡಿ ಸ್ನಾತಕೋತ್ತರ ಡಿಪ್ಲೊಮಾವನ್ನೂ ಪೂರ್ಣಗೊಳಿಸಿದರು.
ಶುಭಂ ಅವರ ಯುಪಿಎಸ್ಸಿ ಪಯಣ 2016ರಲ್ಲಿ ಆರಂಭವಾಯಿತು. 2017ರಲ್ಲಿ ಅವರು ಮೇನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು. ಆದರೆ ಹಿನ್ನಡೆಯಿಂದ ಕುಗ್ಗದೆ, 2018ರ ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿ ಇಂಡಿಯನ್ ಕಾರ್ಪೊರೇಟ್ ಲಾ ಸರ್ವಿಸ್ ಗೆ ಆಯ್ಕೆಯಾದರು. 2019 ರಲ್ಲಿ ಸೇವೆಗೆ ಸೇರ್ಪಡೆಯಾದ ಅವರು, ಪ್ರಸ್ತುತ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2020ರಲ್ಲಿ ಶುಭಂ ಅವರು ಇಂಡಿಯನ್ ಪೋಸ್ಟಲ್ ಸರ್ವಿಸ್ಗೆ ಆಯ್ಕೆಯಾದರೂ, ಆ ಹುದ್ದೆಗೆ ಸೇರ್ಪಡೆಯಾಗದಿರಲು ನಿರ್ಧರಿಸಿದರು. 2023 ರಲ್ಲಿ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಗೆ ಹಾಜರಾದರೂ, ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಐಎಎಸ್ ಅಧಿಕಾರಿಯಾಗಬೇಕೆಂಬ ಅವರ ಕನಸನ್ನು ನನಸಾಗಿಸಿಕೊಳ್ಳಲು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿಸುತ್ತಲೇ ಇದ್ದರು.
ಸತತ ಹಿನ್ನಡೆಗಳು, ಉದ್ಯೋಗದ ಒತ್ತಡ ಮತ್ತು ಕೊನೆಯ ಪ್ರಯತ್ನದ ಸವಾಲುಗಳ ನಡುವೆಯೂ ಶುಭಂ ಸಿಂಗ್ ತಮ್ಮ ಗುರಿಯಿಂದ ಹಿಂದೆ ಸರಿಯಲಿಲ್ಲ. ವರ್ಷಗಳ ಪರಿಶ್ರಮ, ನಿರಂತರ ಸಿದ್ಧತೆಯಫಲವಾಗಿ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರು 21ನೇ ಅಖಿಲ ಭಾರತ ರ್ಯಾಂಕ್ ಗಳಿಸಿದರು. ಈ ಮೂಲಕ ದೇಶದಾದ್ಯಂತ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದ್ದಾರೆ.