ವರಂಗಲ್, ಸೆ. 11 (DaijiworldNews/TA): ತೆಲಂಗಾಣದ ಮುಲುಗು ಜಿಲ್ಲೆಯ ಏಟೂರುನಾಗಾರಂ ಅರಣ್ಯ ಪ್ರದೇಶದ ಗಡಿಭಾಗದಲ್ಲಿ ಅತ್ಯಂತ ವಿಷಪೂರಿತ ಹಾಗೂ ಅಪರೂಪದ ‘ಬ್ಯಾಂಡೆಡ್ ಕ್ರೇಟ್’ ಹಾವು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ಹಾದಿಹೋಕರಲ್ಲಿ ಆತಂಕ ಮೂಡಿಸಿದೆ.

ರಾತ್ರಿ ವೇಳೆ ರಸ್ತೆ ದಾಟುತ್ತಿದ್ದ ಹಾವನ್ನು ಸಂಚರಿಸುತ್ತಿದ್ದ ಪ್ರಯಾಣಿಕರು ಗಮನಿಸಿದ್ದಾರೆ. ಕಪ್ಪು ಮತ್ತು ಹಳದಿ ಬಣ್ಣದ ವಿಶಿಷ್ಟ ಪಟ್ಟೆಗಳನ್ನು ಹೊಂದಿದ್ದ ಹಾವನ್ನು ಕಂಡು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ದಟ್ಟ ಅರಣ್ಯ ಪ್ರದೇಶದಲ್ಲಿ ಇಂತಹ ಅಪರೂಪದ ಹಾವು ಕಾಣಿಸಿಕೊಂಡಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯಕೀಯ ತಜ್ಞರ ಪ್ರಕಾರ, ಬ್ಯಾಂಡೆಡ್ ಕ್ರೇಟ್ ಅತ್ಯಂತ ವಿಷಕಾರಿ ಹಾವುಗಳ ಪೈಕಿ ಒಂದಾಗಿದೆ. ಇದರ ಕಡಿತ ಅಪಾಯಕಾರಿಯಾಗಿದ್ದು, ಹಾವು ಕಂಡುಬಂದ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ವರಂಗಲ್ ಜಿಲ್ಲೆಯ ಖಾನಾಪುರ ಮಂಡಲದ ಅಶೋಕ್ ನಗರ ಗ್ರಾಮದ ಬಳಿಯೂ ಸುಮಾರು ಐದು ಅಡಿ ಉದ್ದದ ಇದೇ ಜಾತಿಯ ಹಾವು ಕಾಣಿಸಿಕೊಂಡಿತ್ತು. ಹಾವನ್ನು ಮೊದಲಿಗೆ ಕಂಡ ಸ್ಥಳೀಯರು ಅದು ಆಟಿಕೆ ಹಾವಿರಬಹುದು ಎಂದು ಭಾವಿಸಿದ್ದರು. ಆದರೆ ಅದರ ಚಲನವಲನ ಗಮನಿಸಿದ ಬಳಿಕ ಅರಣ್ಯ ಇಲಾಖೆ ಹಾಗೂ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕರು ಹಾವನ್ನು ಸುರಕ್ಷಿತವಾಗಿ ಹಿಡಿದು ಬಳಿಕ ದಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು.
ಅರಣ್ಯಾಧಿಕಾರಿಗಳ ಪ್ರಕಾರ, ಬ್ಯಾಂಡೆಡ್ ಕ್ರೇಟ್ ಹಾವುಗಳು ಚೀನಾ, ನೇಪಾಳ, ಥೈಲ್ಯಾಂಡ್, ಕಾಂಬೋಡಿಯಾ ಹಾಗೂ ವಿಯೆಟ್ನಾಂ ಸೇರಿದಂತೆ ಹಲವು ದೇಶಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿಯೂ ಕೆಲವು ರಾಜ್ಯಗಳಲ್ಲಿ ಇವು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಲಾರಿ ಅಥವಾ ಇತರ ಸರಕು ಸಾಗಣೆ ವಾಹನಗಳ ಮೂಲಕ ಈ ಹಾವುಗಳು ದಾರಿ ತಪ್ಪಿ ತೆಲಂಗಾಣದ ಪಾಕಾಲ ಹಾಗೂ ಏಟೂರುನಾಗಾರಂ ಅರಣ್ಯ ಪ್ರದೇಶಗಳಿಗೆ ಬಂದಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಅಪರೂಪದ ಅಥವಾ ವಿಷಪೂರಿತ ಹಾವುಗಳು ಕಂಡುಬಂದಾಗ ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅವುಗಳನ್ನು ಕೊಲ್ಲಬಾರದು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಹಾವು ಕಂಡ ತಕ್ಷಣ ಅದರ ಸಮೀಪ ಹೋಗದೆ ಸುರಕ್ಷಿತ ಅಂತರ ಕಾಯ್ದುಕೊಂಡು, ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಸ್ಥಳೀಯ ಉರಗ ರಕ್ಷಕರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಇಂತಹ ಅಪರೂಪದ ಹಾವುಗಳ ಕಾಣಿಸಿಕೊಳ್ಳುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ವಿಶೇಷ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.