ಬೆಂಗಳೂರು, ಸೆ.14(Daijiworld News/SS): ದಿನ ಕಳೆದಂತೆ ವಿಕ್ರಮ್ ಜತೆಗೆ ಮರುಸಂಪರ್ಕ ಸಾಧಿಸುವುದು ಕಠಿಣವಾಗುತ್ತಾ ಬಂದಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಂದ್ರಯಾನ ನೌಕೆ ಚಂದ್ರನಲ್ಲಿ ಇಳಿಯಲು ಇನ್ನೇನು ಕೆಲವೇ ಕಿಮೀ ಇರುವಾಗ ಸಂಪರ್ಕ ಕಡಿತಗೊಂಡಿತ್ತು. 'ವಿಕ್ರಮ್' ಜತೆ ಮತ್ತೆ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ಸತತ ಪ್ರಯತ್ನ ನಡೆಸಿದ್ದರು. ಆದರೆ ಭಾರತದ ಚಂದ್ರಯಾನ -2 ಮಿಷನ್ನ ಭಾಗವಾಗಿರುವ ಲ್ಯಾಂಡರ್-ರೋವರ್ 'ವಿಕ್ರಮ್' ಜತೆಗೆ ಸಂಪರ್ಕ ಮರುಸ್ಥಾಪನೆ ಮಾಡುವ ಇಸ್ರೋ ಪ್ರಯತ್ನ ಯಶಸ್ವಿ ಆಗುವ ಸಾಧ್ಯತೆ ಕ್ರಮೇಣ ಕ್ಷೀಣಿಸುತ್ತಿದೆ ಎನ್ನಲಾಗಿದೆ.
ಇಸ್ರೋ ಅಧಿಕಾರಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿದ್ದು, ದಿನ ಕಳೆದಂತೆ ವಿಕ್ರಮ್ ಜತೆಗೆ ಮರುಸಂಪರ್ಕ ಸಾಧಿಸುವುದು ಕಠಿಣವಾಗುತ್ತಾ ಬಂದಿದೆ. ಪ್ರತಿಯೊಂದು ಗಂಟೆ ಗಂಟೆಯಲ್ಲಿಯೂ ಬ್ಯಾಟರಿಯಲ್ಲಿನ ಶಕ್ತಿ ನಶಿಸುತ್ತಾ ಸಾಗಿದೆ. ಹಾಗಾಗಿ ಅದು ಕಾರ್ಯಾಚರಣೆಗೆ ಅಗತ್ಯವಾಗಿರಬೇಕಾದ ಶಕ್ತಿಯನ್ನು ಏನೂ ಉಳಿಸಿಕೊಳ್ಳಲಾರದು ಎಂದು ಹೇಳಿದ್ದಾರೆ.
ಪ್ರತಿ ನಿಮಿಷವೂ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಹಾಗಾಗಿ ವಿಕ್ರಮ್ ಜತೆಗೆ ಮತ್ತೆ ಸಂಪರ್ಕ ಸಾಧಿಸುವಿಕೆಯ ಸಾಧ್ಯತೆ ತೀರಾ ತೀರಾ ಕಡಿಮೆಯಾಗುತ್ತಾ ಸಾಗಿದೆ ಎಂದಿದ್ದಾರೆ.