ಚಿತ್ರದುರ್ಗ, ಸೆ.12 (DaijiworldNews/TA): ಆಧುನಿಕತೆಯ ಭರಾಟೆಯ ನಡುವೆಯೂ ನೂರಾರು ವರ್ಷಗಳ ಹಿಂದಿನ ಸಂಪ್ರದಾಯ, ಆಚರಣೆ ಹಾಗೂ ನಂಬಿಕೆಗಳನ್ನು ಇಂದಿಗೂ ಜೀವಂತವಾಗಿಟ್ಟುಕೊಂಡಿರುವ ಹಲವು ಪ್ರದೇಶಗಳು ನಮ್ಮ ರಾಜ್ಯದಲ್ಲಿವೆ. ಅಂತಹ ವಿಶಿಷ್ಟ ಹಾಗೂ ಕುತೂಹಲ ಮೂಡಿಸುವ ಬುಡಕಟ್ಟು ಸಂಪ್ರದಾಯಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಡಿಭಾಗದಲ್ಲಿರುವ ಗೌರಸಮುದ್ರ ಗ್ರಾಮ ಸಾಕ್ಷಿಯಾಗಿದೆ.

ಇಲ್ಲಿನ ಬುಡಕಟ್ಟು ಜನರ ಆರಾಧ್ಯ ದೈವ ಶ್ರೀ ಮಾರಮ್ಮ ದೇವಿಯ ಮಹಾ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಜಾತ್ರೆಗೂ ಮುನ್ನ ಗ್ರಾಮಸ್ಥರು ಪಾಲಿಸುವ ಕಠಿಣ ಆಚರಣೆಗಳು ಇದೀಗ ಗಮನ ಸೆಳೆದಿವೆ. ಪ್ರತಿ ವರ್ಷ ಭಾದ್ರಪದ ಮಾಸದ ಮೊದಲ ಮಂಗಳವಾರದಂದು ನಡೆಯುವ ಶ್ರೀ ಸಂಗಮೇಶ್ವರ ಅಥವಾ ಮಾರಮ್ಮ ದೇವಿಯ ಬೃಹತ್ ಜಾತ್ರೆ ಈ ಬಾರಿ ಸೆಪ್ಟೆಂಬರ್ 15ರಂದು ನಡೆಯಲಿದೆ. ಆಂಧ್ರಪ್ರದೇಶದ ಗಡಿಯಂಚಿನಲ್ಲಿರುವ ಗೌರಸಮುದ್ರ ಗ್ರಾಮದಲ್ಲಿ ನಡೆಯುವ ಈ ಜಾತ್ರೆಗೆ ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.
ಆದರೆ, ಜಾತ್ರೆಗೂ ಸುಮಾರು 15 ದಿನಗಳ ಮುನ್ನವೇ ಗ್ರಾಮದಲ್ಲಿ ‘ಸಾರು ಹಾಕುವ’ ವಿಶಿಷ್ಟ ಸಂಪ್ರದಾಯಕ್ಕೆ ಚಾಲನೆ ನೀಡಲಾಗುತ್ತದೆ. ಸಾರು ಕಟ್ಟೆಯ ಬಳಿ ಗ್ರಾಮದ ಹಿರಿಯರು ಸೇರಿ ಜಾತ್ರೆಯ ದಿನಾಂಕವನ್ನು ಘೋಷಿಸುತ್ತಾರೆ. ಬಳಿಕ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುವ ಮೂಲಕ ಜಾತ್ರೆಯ ಸಂದೇಶವನ್ನು ಸಾರಲಾಗುತ್ತದೆ. ಈ ಆಚರಣೆ ಆರಂಭವಾದ ಬಳಿಕ ಗ್ರಾಮದಲ್ಲಿ ಹಲವು ಕಠಿಣ ನಿಯಮಗಳು ಜಾರಿಗೆ ಬರುತ್ತವೆ.
‘ಸಾರು’ ಆಚರಣೆ ಆರಂಭವಾದ ಬಳಿಕ ಮಾರಮ್ಮ ದೇವಿಯ ದೇವಸ್ಥಾನದಲ್ಲಿ ಗಂಟೆ ಬಾರಿಸುವಂತಿಲ್ಲ. ದೇವಿಗೆ ಮಂಗಳಾರತಿಯನ್ನೂ ಮಾಡುವುದಿಲ್ಲ ಎಂಬುದು ಇಲ್ಲಿನ ಪ್ರಮುಖ ನಿಯಮವಾಗಿದೆ. ಅಷ್ಟೇ ಅಲ್ಲದೆ, ಮನೆಗಳಲ್ಲಿ ಕಾವಲಿ ಇಟ್ಟು ರೊಟ್ಟಿ, ಚಪಾತಿ ಅಥವಾ ದೋಸೆ ಮಾಡುವುದಕ್ಕೂ ನಿರ್ಬಂಧವಿರುತ್ತದೆ. ಮಾಂಸ ಸೇವನೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಇದರಲ್ಲೂ ಅತ್ಯಂತ ವಿಶಿಷ್ಟವಾದದ್ದು ಗ್ರಾಮಸ್ಥರು ಪಾಲಿಸುವ ಎಂಟು ದಿನಗಳ ಕಠಿಣ ವ್ರತ. ಈ ಅವಧಿಯಲ್ಲಿ ಗ್ರಾಮಸ್ಥರು ಸ್ನಾನ ಮಾಡುವುದಿಲ್ಲ, ಬಟ್ಟೆ ಬದಲಿಸುವುದಿಲ್ಲ. ಕೂದಲು ಕತ್ತರಿಸುವುದು ಹಾಗೂ ಶೇವಿಂಗ್ ಮಾಡಿಸಿಕೊಳ್ಳುವುದಕ್ಕೂ ಅವಕಾಶವಿರುವುದಿಲ್ಲ. ಆರಾಧ್ಯ ದೈವದ ಮೇಲಿನ ಭಕ್ತಿ ಹಾಗೂ ನಂಬಿಕೆಯಿಂದ ಇಡೀ ಗ್ರಾಮಸ್ಥರು ಒಮ್ಮತದಿಂದ ಈ ಆಚರಣೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
ಆಚರಣೆಯ ಹಿಂದೆ ರೋಚಕ ಐತಿಹ್ಯ : ಈ ವಿಶಿಷ್ಟ ಸಂಪ್ರದಾಯದ ಹಿಂದೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಐತಿಹ್ಯ ಹಾಗೂ ನಂಬಿಕೆಯಿದೆ. ಜಾತ್ರೆ ಮುಗಿದ ಬಳಿಕ ಶ್ರೀ ಮಾರಿ ಮಹೇಶ್ವರಿ ದೇವಿ ವಿಶ್ವ ಪರ್ಯಟನೆಗೆ ತೆರಳುತ್ತಾಳೆ. ‘ಸಾರು’ ಹಾಕುವ ದಿನದಂದು ದೇವಿ ಮತ್ತೆ ಗ್ರಾಮಕ್ಕೆ ಮರಳಿ ಬಂದು ನೆಲೆಸುತ್ತಾಳೆ ಎಂಬುದು ಭಕ್ತರ ನಂಬಿಕೆ. ದೇವಿಯ ಈ ಆರಾಧನೆಯಿಂದ ಮಕ್ಕಳಿಗೆ ಸಿಡುಬು, ದಡಾರ ಸೇರಿದಂತೆ ಸಾಂಕ್ರಾಮಿಕ ರೋಗಗಳು ಬಾಧಿಸುವುದಿಲ್ಲ. ಗ್ರಾಮದಲ್ಲಿ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗುತ್ತದೆ ಎಂಬ ವಿಶ್ವಾಸವೂ ಇಲ್ಲಿನ ಜನರಲ್ಲಿದೆ. ಗೌರಸಮುದ್ರ ಮಾತ್ರವಲ್ಲದೆ ಕೋನಸಾಗರ, ಓಬಣ್ಣನಹಳ್ಳಿ ಹಾಗೂ ಹನುಮಂತನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿಯೂ ಈ ಪುರಾತನ ಸಂಪ್ರದಾಯವನ್ನು ಭಕ್ತರು ಇಂದಿಗೂ ಶ್ರದ್ಧೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.
ಆಧುನಿಕತೆಯ ನಡುವೆಯೂ ತಲೆತಲಾಂತರಗಳಿಂದ ಬಂದಿರುವ ನಂಬಿಕೆ, ಸಂಪ್ರದಾಯ ಹಾಗೂ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಗೌರಸಮುದ್ರದ ಮಾರಮ್ಮ ಜಾತ್ರೆ ಇದೀಗ ಮತ್ತೊಮ್ಮೆ ಭಕ್ತರು ಹಾಗೂ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸೆಪ್ಟೆಂಬರ್ 15ರಂದು ನಡೆಯಲಿರುವ ಜಾತ್ರೆಗೆ ಜಿಲ್ಲಾಡಳಿತವೂ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ.