ಜಮ್ಮು, ಸೆ.12 (DaijiworldNews/AA): ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಲಷ್ಕರ್ -ಇ- ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ವಿರುದ್ಧ ಎನ್ಐಎ ನ್ಯಾಯಾಲಯ ಎರಡನೇ ಬಾರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಹಫೀಜ್ ಸಯೀದ್ ಪಾಕಿಸ್ತಾನದಲ್ಲಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಶಸ್ತ್ರಾಸ್ತ್ರಗಳು, ಹಣ ಮತ್ತು ಸೂಚನೆಗಳನ್ನು ನೀಡುತ್ತಿರುವುದಕ್ಕೆ ಸಂಬಂಧಿಸಿದ ಭಯೋತ್ಪಾದನಾ ಪ್ರಕರಣ ಸಂಬಂಧ ಹಫೀಜ್ ಸಯೀದ್ ವಿರುದ್ಧ ಈ ವಾರಂಟ್ ಹೊರಡಿಸಲಾಗಿದೆ. ಈ ಮೂಲಕ ಕಳೆದ ಎರಡು ತಿಂಗಳಲ್ಲಿ ಆತನ ವಿರುದ್ಧ ಎರಡನೇ ಬಾರಿಗೆ ಜಾಮೀನು ರಹಿತ ವಾರಂಟ್ ಪಡೆದುಕೊಂಡಿದೆ.
ತನಿಖೆ ವೇಳೆ ಭಯೋತ್ಪಾದಕ ಜಾಲವೊಂದನ್ನು ಪತ್ತೆಹಚ್ಚಲು, ಎಲ್ ಇಟಿ ಹಾಗೂ ಅದರ ಅಂಗಸಂಸ್ಥೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (ಎನ್ಐಎ) ನೊಂದಿಗೆ ಸಂಪರ್ಕ ಹೊಂದಿದ್ದ ಇನ್ನೂ ಹಲವು ಭಯೋತ್ಪಾದಕರು ಹಾಗೂ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲು ಕಾರಣವಾಯಿತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ'ಯ ಸೆಕ್ಷನ್ 75 ರ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ ಕೋರಿ ಎನ್ಐಎ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ಪಾಕಿಸ್ತಾನದ ಪಂಜಾಬ್ನ ಸರ್ಗೋಧಾ ನಿವಾಸಿಯಾಗಿರುವ ಸಯೀದ್ನನ್ನು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಬತ್ಪೊರಾದ ನಿವಾಸಿಯಾಗಿರುವ ಭಟ್ನಿಂದ ಚೀನಾ ನಿರ್ಮಿತ ಗ್ರೆನೇಡ್ ಮತ್ತು 15 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತನ ವಿರುದ್ಧ ಝಕೂರ ಪೊಲೀಸ್ ಠಾಣೆಯಲ್ಲಿ ಯುಎಪಿಎ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ವೇಳೆ ಸಯೀದ್ ಮತ್ತು ಬಂಧಿತ ಪಾಕಿಸ್ತಾನಿ ಭಯೋತ್ಪಾದಕರು ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದೆ.
ಸಯೀದ್ ಪಾಕಿಸ್ತಾನದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದು, ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು, ಹಣ ಮತ್ತು ನಿರ್ದೇಶನಗಳನ್ನು ಒದಗಿಸುತ್ತಿದ್ದಾನೆ. ಈತ ಪ್ರಸ್ತುತ ಪಾಕಿಸ್ತಾನದಲ್ಲಿದ್ದಾನೆ ಮತ್ತು ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ತನಿಖಾ ಸಂಸ್ಥೆಯ ವಾದವನ್ನು ಆಲಿಸಿದ ಎನ್ಐಎ ಕಾಯ್ದೆಯಡಿ ವಿಶೇಷ ನ್ಯಾಯಾಧೀಶರಾಗಿರುವ ಪ್ರೇಮ್ ಸಾಗರ್, ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.