ಬೆಂಗಳೂರು, ಸೆ. 12 (DaijiworldNews/AK): ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಯಾವ ಮಟ್ಟಕ್ಕೂ ಇಳಿಯುತ್ತದೆ. ಆದರೆ ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಧ್ಯೇಯದಲ್ಲಿ ವಿಶ್ವಾಸವಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ವೇಳೆ ದೇಶದ ಜನರಿಗೆ ದೇಶಾಭಿಮಾನದ ಕಿಚ್ಚು ಹಚ್ಚಿದ್ದ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಕಾಂಗ್ರೆಸ್, ವಿಧಾನ ಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರೆ ಬೆಂಬಲಿಸುತ್ತದೆ. ಆದರೆ ಬಿಜೆಪಿ ದೇಶದ ಎಲ್ಲಾ ಸಮುದಾಯಗಳ ಕಲ್ಯಾಣಕ್ಕೆ ದುಡಿಯುತ್ತಿದೆ ಎಂದು ತಿಳಿಸಿದರು.
ಮೀಸಲಾತಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೆ ಹೇಳಿದ್ದೊಂದು ಆದರೆ ನಡೆದುಕೊಂಡಿದ್ದೇ ಒಂದು. ಒಟ್ಟಾಗಿ, ಒಂದಾಗಿ ದೇಶವನ್ನು ಮುನ್ನಡೆಸಲು ಬಿಜೆಪಿ ಮುಂದಾದರೆ ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸಿಕೊಂಡು ಮತ ಪಡೆಯಲು ನೋಡುತ್ತಿದೆ ಎಂದು ದೂರಿದರು.
ಭಾರತ್ ಜೋಡೊ.. ಕಿವಿ ಮೇಲೆ ಹೂ..
ಗ್ಯಾರಂಟಿ ಇಲ್ಲದೆ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂದು ಮನವರಿಕೆ ಆಗಿರುವ ಕಾಂಗ್ರೆಸ್ ಈಗ ಭಾರತ್ ಜೋಡೊ ಸಂಘಗಳ ಮೂಲಕ ರಾಜ್ಯದ ಜನರಿಗೆ ಕಿವಿ ಹೂ ಮುಡಿಸಿ ಅಧಿಕಾರಕ್ಕೆ ಬರಬಹುದು ಎಂದು ಹೊರಟಿದೆ. ಆದರೆ ಪ್ರಧಾನಿ ಮೋದಿ ಅವರು 2047 ರ ವೇಳೆಗೆ ವಿಕಸಿತ ಭಾರತ ಆಗಬೇಕು, ದೇಶ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣಬೇಕು, ಸಮಾಜದ ಕಟ್ಟಕಡೆಯ ಪ್ರಜೆಗೂ ನ್ಯಾಯ ಸಿಗಬೇಕು ಎಂಬ ಇಚ್ಛಾಶಕ್ತಿ ಹೊಂದಿದ್ದಾರೆ. ನಾನು ಪ್ರಧಾನಿ ಅಲ್ಲ ಪ್ರಧಾನ ಸೇವಕ ಎಂಬ ಭಾವವನೆಯಿಂದ ಭಾರತವನ್ನು ಮುನ್ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.
2028 ರ ಚುನಾವಣೆ ನಂತರ ಮತ್ತೆ ನಾನೇ ಎಂದು ಡಿಕೆಶಿ ಹಗಲುಗನಸು ಕಾಣ್ತ ಇದ್ದಾರೆ. ಆದರೆ ಈ ಕನಸು ನನಸಾಗುವುದಿಲ್ಲ ಎಂಬ ಅರಿವೂ ಅವರಿಗೆ ಇದೆ. ಆದರೆ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆಗ ಗೊಲ್ಲ ಸಮುದಾಯದ ಅಪೇಕ್ಷೆಗಳನ್ನು ಈಡೇರಿಸಲು ಮುಂದಾಗುತ್ತೇವೆ. ನಮ್ಮ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಪಂಚ ಗ್ಯಾರಂಟಿ ನೆಪ ಹೇಳಿದ ಕಾಂಗ್ರೆಸ್ ರಾಜ್ಯದ ಜನರಿಗೆ ದ್ರೋಹ ಬಗೆದಿದೆ ಎಂದರು.