ಬೆಂಗಳೂರು, ಸೆ.12 (DaijiworldNews/AA): ಖಾಸಗಿ ಶಾಲೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನೂ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಪರಿಗಣಿಸುವಂತೆ ಬೇಡಿಕೆ ಇದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಮುಂದೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿರುವ ವಿವಿಧ ಬೇಡಿಕೆಗಳು ಸರ್ಕಾರದ ಗಮನದಲ್ಲಿವೆ. ಬೆಂಗಳೂರಿನ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಶಾಲಾ ಸಮಯ ಬದಲಾವಣೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಕುರಿತು ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು" ಎಂದರು.
"ಖಾಸಗಿ ಶಾಲೆಗಳು ಸರ್ಕಾರಕ್ಕೆ ಹಣ ಪಾವತಿಸಲು ಸಿದ್ಧವಿದ್ದು, ಸರ್ಕಾರಿ ಪಠ್ಯಪುಸ್ತಕಗಳನ್ನು ನೀಡುವಂತೆ ಮನವಿ ಮಾಡಿರುವ ವಿಚಾರವೂ ಗಮನದಲ್ಲಿದೆ. ಈ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.
"ಶಿಕ್ಷಣ ಸಚಿವನಾಗಿ ಮೂರು ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಎರಡನೇ ಬಾರಿಯೂ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೇರೆ ಇಲಾಖೆ ಬೇಕೇ ಎಂದು ದೂರವಾಣಿ ಮೂಲಕ ಕೇಳಿದರೂ, ಯಾವುದೇ ಮರು ಯೋಚನೆ ಮಾಡದೆ ಶಿಕ್ಷಣ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ" ಎಂದು ತಿಳಿಸಿದರು.