ನವದೆಹಲಿ, ಸೆ.12 (DaijiworldNews/TA): ಬ್ರಿಕ್ಸ್ ಯಾವುದೇ ನಿರ್ದಿಷ್ಟ ದೇಶ ಅಥವಾ ಗುಂಪಿನ ವಿರುದ್ಧ ಇರುವ ಒಕ್ಕೂಟವಲ್ಲ. ಬದಲಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳು ಕೇವಲ ನಿಯಮಗಳನ್ನು ಪಾಲಿಸುವವರಾಗಿರದೆ, ಜಾಗತಿಕ ನಿಯಮಗಳನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು 10 ಅಂಶಗಳ ಕಾರ್ಯತಂತ್ರದ ರೋಡ್ಮ್ಯಾಪ್ನ್ನು ಪ್ರಸ್ತಾಪಿಸಿದರು. “ಜಾಗತಿಕ ಭವಿಷ್ಯವನ್ನು ನಾವೆಲ್ಲರೂ ಹಂಚಿಕೊಳ್ಳುವುದಾದರೆ, ಅದನ್ನು ವಿನ್ಯಾಸಗೊಳಿಸುವ ಮತ್ತು ರೂಪಿಸುವ ಹಕ್ಕು ಕೂಡ ಎಲ್ಲ ದೇಶಗಳಿಗೂ ಸಮಾನವಾಗಿ ಇರಬೇಕು. ಈ ಪರಿವರ್ತನೆಯ ನಾಯಕತ್ವ ವಹಿಸಲು ಭಾರತ ಸಂಪೂರ್ಣ ಸಜ್ಜಾಗಿದೆ” ಎಂದು ಮೋದಿ ಹೇಳಿದರು.
ಭಾರತದ ಬ್ರಿಕ್ಸ್ ಅಧ್ಯಕ್ಷತೆಯು ‘ಜನಕೇಂದ್ರಿತ’ ಹಾಗೂ ‘ಮಾನವೀಯತೆಗೆ ಪ್ರಥಮ ಆದ್ಯತೆ’ ಎಂಬ ಪರಿಕಲ್ಪನೆಯನ್ನು ಆಧರಿಸಿದೆ ಎಂದು ಪ್ರಧಾನಿ ಹೇಳಿದರು. ಚೇತರಿಕೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ಭಾರತವು ಪ್ರಮುಖ ಆದ್ಯತೆಗಳಾಗಿ ಪರಿಗಣಿಸಿದೆ. ಬ್ರಿಕ್ಸ್ ಶೃಂಗಸಭೆಯನ್ನು ಸಾಮಾನ್ಯ ಜನರೊಂದಿಗೆ ಬೆಸೆಯುವ ನಿಟ್ಟಿನಲ್ಲಿ ವಿಶೇಷ ಒತ್ತು ನೀಡಲಾಗಿದೆ ಎಂದರು. ಬ್ರಿಕ್ಸ್ ರಾಷ್ಟ್ರಗಳು ಪರಸ್ಪರರ ದೃಷ್ಟಿಕೋನಗಳನ್ನು ಗೌರವಿಸುತ್ತವೆ ಹಾಗೂ ಸರ್ವಸಮ್ಮತಿಯ ಮೂಲಕ ಮುಂದೆ ಸಾಗುತ್ತವೆ ಎಂದು ಮೋದಿ ಹೇಳಿದರು. “ನಾವು ಯಾರ ವಿರುದ್ಧವೂ ಇಲ್ಲ. ಬದಲಾಗಿ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಲು ನಾವು ಪ್ರಯತ್ನಿಸುತ್ತೇವೆ” ಎಂದು ಹೇಳುವ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ಪ್ರಧಾನಿ ಮೋದಿ ಸಂದೇಶ ನೀಡಿದರು.
ಮುಂಬರುವ ಎರಡು ದಶಕಗಳಲ್ಲಿ ಜಗತ್ತಿನ ‘ಅಧಿಕಾರ ಮತ್ತು ವಿಶೇಷ ಸೌಲಭ್ಯಗಳ ಪಿರಮಿಡ್’ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ಮೋದಿ ಪ್ರತಿಪಾದಿಸಿದರು. ಪ್ರತಿಯೊಂದು ದೇಶಕ್ಕೂ ಸಮಾನ ಪಾಲುದಾರಿಕೆ ದೊರೆಯುವಂತಹ ಜಾಗತಿಕ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಅವರು ಕರೆ ನೀಡಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸುಧಾರಣೆಯನ್ನು ಮತ್ತಷ್ಟು ಮುಂದೂಡಲು ಸಾಧ್ಯವಿಲ್ಲ. ಸುಧಾರಣೆಗೆ ನಿರ್ದಿಷ್ಟ ಕಾಲಮಿತಿ ಹಾಗೂ ಸ್ಪಷ್ಟ ಫಲಿತಾಂಶ ಇರಬೇಕು ಎಂದು ಪ್ರಧಾನಿ ಒತ್ತಿಹೇಳಿದರು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿನ ಹಕ್ಕು ಮತ್ತು ಪ್ರತಿನಿಧಿತ್ವದ ವ್ಯವಸ್ಥೆಯೂ ಇಂದಿನ ಜಾಗತಿಕ ಆರ್ಥಿಕ ವಾಸ್ತವಕ್ಕೆ ಅನುಗುಣವಾಗಿ ಬದಲಾಗಬೇಕು ಎಂದು ಅವರು ಹೇಳಿದರು.
ಶೃಂಗಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಹಾಗೂ ಯೋಜನೆಗಳನ್ನು ನಿರಂತರವಾಗಿ ಪರಿಶೀಲಿಸಿ ಪರಿಣಾಮಕಾರಿಯಾಗಿ ಜಾರಿಗೆ ತರಲು ‘ಬ್ರಿಕ್ಸ್ ಕಂಟಿನ್ಯೂಟಿ ಆ್ಯಂಡ್ ಇಂಪ್ಲಿಮೆಂಟೇಶನ್ ಮೆಕಾನಿಸಂ’ ರೂಪಿಸುವಂತೆ ಮೋದಿ ಪ್ರಸ್ತಾಪಿಸಿದರು. ಬ್ರಿಕ್ಸ್ನ ಸಾಂಸ್ಥಿಕ ವೇಗ ಯಾವುದೇ ಹಂತದಲ್ಲೂ ಕುಂಠಿತವಾಗಬಾರದು. ಜಾಗತಿಕ ದಕ್ಷಿಣದ ರಾಷ್ಟ್ರಗಳು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪರಸ್ಪರ ಸಹಕಾರ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು. ಸಮುದ್ರ ಮಾರ್ಗಗಳಲ್ಲಿ ಸರಕು ಸಾಗಣೆ ನೌಕೆಗಳ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಜಾಗತಿಕ ವ್ಯಾಪಾರ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ನಾವಿಕರ ಸುರಕ್ಷತೆಗಾಗಿ ‘ಸಮುದ್ರ ನಾವಿಕರ ತುರ್ತು ನೆರವು ಜಾಲ’ ರೂಪಿಸುವಂತೆ ಕರೆ ನೀಡಿದರು. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಸೇರಿದಂತೆ ಪ್ರಮುಖ ಸಮುದ್ರ ಮಾರ್ಗಗಳಲ್ಲಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾವಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆ (AI), ಸೈಬರ್ಸ್ಪೇಸ್, ಬಾಹ್ಯಾಕಾಶ ಹಾಗೂ ಜೈವಿಕ ತಂತ್ರಜ್ಞಾನ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಜಾಗತಿಕ ನಿಯಮಗಳನ್ನು ರೂಪಿಸುವಲ್ಲಿ ಗ್ಲೋಬಲ್ ಸೌತ್ ರಾಷ್ಟ್ರಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮೋದಿ ಕರೆ ನೀಡಿದರು. ಬ್ರಿಕ್ಸ್ ವೇದಿಕೆಯ ಮೂಲಕ ಯುವ ರಾಜತಾಂತ್ರಿಕರಿಗೆ ಅಗತ್ಯ ತರಬೇತಿ ಹಾಗೂ ಅವಕಾಶಗಳನ್ನು ಒದಗಿಸಿ ಅವರನ್ನು ಬೆಳೆಸಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಘೋಷಿಸಿದರು. ಭಾರತದ ಬ್ರಿಕ್ಸ್ ಅಧ್ಯಕ್ಷತೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲ ರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸಿದ ಮೋದಿ, ಜಾಗತಿಕ ವೇದಿಕೆಯಲ್ಲಿ ಬ್ರಿಕ್ಸ್ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡಿದೆ. ಇದೀಗ ಒಮ್ಮತದಿಂದ ಕೈಗೊಂಡಿರುವ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ ಎಂದು ಹೇಳಿದರು.