ಬೆಂಗಳೂರು, ಸೆ.12 (DaijiworldNews/TA): ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ ಸೇರಿದಂತೆ 18 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಸತತ 36 ಗಂಟೆಗಳ ಕಾರ್ಯಾಚರಣೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದಾಳಿ ಬಳಿಕ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಅಕ್ರಮ ಹಾಗೂ ಲಂಚ ಸಂಗ್ರಹದ ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ಮಾಹಿತಿ ನೀಡಿದೆ.

ಈ ಬೆಳವಣಿಗೆಗಳ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇಡಿ ಅಧಿಕಾರಿಗಳಿಗೆ ದೂರು ನೀಡಿದವರು ಯಾರು ಎಂಬುದು ತಮಗೆ ಗೊತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ಇಡಿ ಪತ್ರಿಕಾ ಪ್ರಕಟಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ದೂರು ನೀಡಿದವರು ಯಾರು ಎಂಬ ಮಾಹಿತಿ ತಮ್ಮಲ್ಲಿದೆ ಎಂದು ಹೇಳಿದ್ದಾರೆ. “ದೂರು ಕೊಟ್ಟವರು ಯಾರು ಅಂತ ಗೊತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಇಲ್ಲಿ ನಮ್ಮ ಪಕ್ಷದವರೂ ಇರಬಹುದು. ಯಾರೇ ಇದ್ದರೂ ಮುಖ್ಯಮಂತ್ರಿಗಳು ಗಮನಹರಿಸುತ್ತಾರೆ. ಬಿಜೆಪಿಯವರಿರಬಹುದು ಅಥವಾ ಅವರ ಸಂಬಂಧಿಕರೂ ಇರಬಹುದು. 50:50 ಇದೆ. ಯಾರು ಅಂತ ಅವರಿಗೆ ಗೊತ್ತಿದೆ, ನಾವು ಹೇಳಿದ್ದೇವೆ” ಎಂದು ಸಚಿವರು ಹೇಳಿದ್ದಾರೆ.
ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ಹಾಜರಾಗಿ ಅಗತ್ಯ ದಾಖಲೆಗಳನ್ನು ನೀಡುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. “ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ದಾಖಲೆ ಕೊಡುತ್ತೇವೆ. ಹೂಡಿಕೆ ಎಂದರೆ ಅಧಿಕೃತವಾಗಿ ವರ್ಗಾವಣೆ ಆಗಬೇಕಲ್ಲವೇ? ಹೆಚ್ಚಿನ ತನಿಖೆ ಮಾಡಬೇಕೆಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ನೋಟಿಸ್ ನೀಡಿ ಕರೆಸಿದರೆ ಸರಿಯಾದ ಉತ್ತರ ಕೊಡುತ್ತೇನೆ. ಇಡಿ ಅಧಿಕಾರಿಗಳು ಕರೆಯಲಿ, ಉತ್ತರ ಕೊಡುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾವು ಯಾವುದೇ ಹೂಡಿಕೆ ಮಾಡಿಲ್ಲ ಎಂದು ಇಡಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ ಸಚಿವರು, ಪ್ರಕರಣದಲ್ಲಿ ಇನ್ನೂ ತನಿಖಾ ಪ್ರಕ್ರಿಯೆ ಮುಂದುವರಿದಿದೆ ಎಂದಿದ್ದಾರೆ. “ಇನ್ನೂ ಬಹಳ ಪ್ರಕ್ರಿಯೆ ಇದೆ. 3ರಿಂದ 6 ತಿಂಗಳ ಅವಕಾಶ ಇದೆ. ಅನುಮಾನಾಸ್ಪದ ಎಂದು ಹೇಳಿದ್ದಾರೆ. ಇದೇ ಅಂತಿಮವಲ್ಲ. ಇನ್ನೂ ಪ್ರಗತಿಯ ಹಂತದಲ್ಲಿದೆ ಎಂದೇ ಪತ್ರಿಕಾ ಪ್ರಕಟಣೆಯಲ್ಲೂ ಇದೆ. ಮೇಲ್ನೋಟಕ್ಕೆ ಹೂಡಿಕೆ ಇದೆ ಎಂದು ಅವರು ಹೇಳುತ್ತಿದ್ದಾರೆ” ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಡಿ ತನಿಖೆ ಮುಂದುವರಿಯುತ್ತಿರುವ ಬೆನ್ನಲ್ಲೇ ಇನ್ನೂ 4ರಿಂದ 5 ಜನರ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂಬ ಮಾಹಿತಿಯನ್ನೂ ಸತೀಶ್ ಜಾರಕಿಹೊಳಿ ಹಂಚಿಕೊಂಡಿದ್ದಾರೆ. “ಇಡಿ ಹೆಚ್ಚಿನ ವಿಚಾರಣೆ ನಡೆಸಲಿ. ಆರೋಪ ಸಾಬೀತಾಗಲಿ. ಆರೋಪದ ಬಗ್ಗೆ ಈಗಲೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಇಡಿ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹೋಗುತ್ತೇವೆ. ನಮ್ಮ ಸೇಫ್ಟಿಯಲ್ಲಿ ನಾವು ಇರಬೇಕು. ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯ. ಅವರಿಗೆ ವಿಚಾರಣೆ ನಡೆಸುವ ಅಧಿಕಾರವಿದೆ” ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆ ಇದೀಗ ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ತಿರುವು ನೀಡಿದ್ದು, ಇಡಿ ದೂರುದಾರರು ಯಾರು ಎಂಬ ಸಚಿವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.