ಭೋಪಾಲ್, ಸೆ.12 (DaijiworldNews/TA): 50ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಚಾಲಕನ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಮಧ್ಯಪ್ರದೇಶದ ಡಬ್ರಾದಲ್ಲಿ ನಡೆದಿದೆ. ಬಸ್ನಲ್ಲಿದ್ದ ಮಕ್ಕಳ ಎದುರೇ ಗುಂಡಿನ ದಾಳಿ ನಡೆದಿದ್ದು, ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಗಿದೆ.

ಟೆಕಾನ್ಪುರದ ಗ್ಲೋರಿಯಸ್ ಕಾನ್ವೆಂಟ್ ಸ್ಕೂಲ್ಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚಾಲಕ ಖೇಮ್ ಸಿಂಗ್, ಪಿಚೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಡಿ ಅಕ್ಬಾಯಿ ಗ್ರಾಮದ ಬಳಿ ಬಸ್ ಚಲಾಯಿಸುತ್ತಿದ್ದರು. ಈ ವೇಳೆ ರಸ್ತೆಯ ಮಧ್ಯಭಾಗದಲ್ಲಿ ಸ್ವಿಫ್ಟ್ ಕಾರೊಂದು ನಿಂತಿತ್ತು. ರಸ್ತೆ ಮಧ್ಯದಲ್ಲಿ ಕಾರು ನಿಂತಿದ್ದರಿಂದ ಬಸ್ ಸಂಚಾರಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಕಾರನ್ನು ಬದಿಗೆ ಸರಿಸುವಂತೆ ಹೇಳಲು ಚಾಲಕ ಖೇಮ್ ಸಿಂಗ್ ಅವರು ಕ್ಲೀನರ್ನನ್ನು ಕಳುಹಿಸಿದ್ದರು. ಆದರೆ ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ಹೇಳಿದ ಕಾರಿನಲ್ಲಿದ್ದವರು ವಾಹನವನ್ನು ತೆರವುಗೊಳಿಸಲು ನಿರಾಕರಿಸಿದ್ದಾರೆ. ಈ ವೇಳೆ ಖೇಮ್ ಸಿಂಗ್ ಸ್ವತಃ ಬಸ್ನಿಂದ ಕೆಳಗಿಳಿದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ಕಾರನ್ನು ಪಕ್ಕಕ್ಕೆ ಸರಿಸುವಂತೆ ಸೂಚಿಸಿದ್ದಾರೆ. ಇದರಿಂದ ಕಾರಿನಲ್ಲಿದ್ದ ಯುವಕರು ಆಕ್ರೋಶಗೊಂಡು ಚಾಲಕನೊಂದಿಗೆ ಗಲಾಟೆ ನಡೆಸಿದ್ದಾರೆ.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಯುವಕರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ದೇಶಿ ನಿರ್ಮಿತ ಪಿಸ್ತೂಲ್ ಹೊರತೆಗೆದು ಖೇಮ್ ಸಿಂಗ್ ಅವರತ್ತ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಚೂರುಗಳು ಚಾಲಕನ ಕಣ್ಣಿನ ಸಮೀಪ ಹಾಗೂ ಕೆನ್ನೆಗೆ ತಗುಲಿ ಅವರು ಗಾಯಗೊಂಡಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಖೇಮ್ ಸಿಂಗ್ ಅವರನ್ನು ತಕ್ಷಣ ಡಬ್ರಾದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬಳಿಕ ಅವರನ್ನು ಗ್ವಾಲಿಯರ್ಗೆ ಸ್ಥಳಾಂತರಿಸಲಾಗಿದೆ.
ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳ ಚಲನವಲನ ಪತ್ತೆಹಚ್ಚಲು ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಚಾಲಕನ ಮೇಲೆಯೇ ಹಾಡಹಗಲೇ ಗುಂಡಿನ ದಾಳಿ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.