ಪಣಜಿ, ಸೆ 14 (Daijiworld News/RD): ದೇಶಿ ನಿರ್ಮಿತ ಲಘು ಯುದ್ಧ ವಿಮಾನ 'ತೇಜಸ್' ಅತ್ಯಂತ ಸವಾಲಿನ 'ಅರೆಸ್ಟೆಡ್ ಲ್ಯಾಂಡಿಂಗ್' ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದೆ. ಹೀಗಾಗಿ ಈ ಪರೀಕ್ಷೆಯಲ್ಲಿ ಯಶಸ್ವಿಯಾದ ದೇಶದ ಮೊದಲ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ತೇಜಸ್ ಪಾತ್ರವಾಗಿದೆ.
ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ 'ತೇಜಸ್'ನ ನೌಕಾಪಡೆ ಆವೃತ್ತಿ ಸೇವೆಗೆ ಸಿದ್ಧವಾಗಿದ್ದು, ಈ ಕುರಿತಂತೆ ನಿನ್ನೆ ನಡೆದ 'ಅರೆಸ್ಟೆಡ್ ಲ್ಯಾಂಡಿಂಗ್' (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಸಾಧನೆಗೈದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಇದೀಗ ಕೂಡ ಭಾರತ ಸೇರಿದೆ. ಈ ಹಿಂದೆ ಯುದ್ದ ವಿಮಾನ ತಯಾರಿಕಾ ದೇಶಗಳಾದ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದವು. ಇತ್ತೀಚೆಗಷ್ಟೇ ಈ ಪಟ್ಟಿಗೆ ಚೀನಾ ಸೇರ್ಪಡೆಯಾಗಿತ್ತು. ಇದೀಗ ತೇಜಸ್ ವಿಮಾನದ ಯಶಸ್ವೀ ಅರೆಸ್ಟೆಡ್ ಲ್ಯಾಡಿಂಗ್ ಮೂಲಕ ಭಾರತ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಲಿದೆ.
ತೇಜಸ್'ನ ನೌಕಾಪಡೆ ಆವೃತ್ತಿಯಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು ಗೋವಾದಲ್ಲಿ ಹಲವು ಬಾರಿ ಇದನ್ನು ಪರೀಕ್ಷಿಸಲಾಗಿದೆ. ಒಬ್ಬನೇ ವ್ಯಕ್ತಿ ಪ್ರಯಾಣಿಸಬಹುದಾದಂಥ ಎರಡು 'ತೇಜಸ್' ವಿಮಾನಗಳನ್ನು ನೆಲದ ಮೇಲೆ ನಿಗದಿತ ಪ್ರದೇಶದೊಳಗೆ ಅನೇಕ ಬಾರಿ ಯಶಸ್ವಿಯಾಗಿ ಇಳಿಸಲಾಗಿದೆ. ವೇಗವಾಗಿ ಹಾರಾಟ ನಡೆಸುವ ಯುದ್ಧ ವಿಮಾನವನ್ನು ಅತ್ಯಂತ ಕಡಿಮೆ ಅಂತರದಲ್ಲಿ ಸುರಕ್ಷಿತವಾಗಿ ಇಳಿಸುವ ಪರೀಕ್ಷೆ ಇದಾಗಿತ್ತು. ಯುದ್ಧ ನೌಕೆಯಿಂದ ಹಾರುವ ಯುದ್ಧ ವಿಮಾನ ಕಾರ್ಯಾಚರಣೆಯ ಬಳಿಕ ನೌಕೆಯ ನಿಗದಿತ ಸ್ಥಳದಲ್ಲಿಇಳಿಯಬೇಕಾದ್ದರಿಂದ ನೌಕಾಪಡೆಯಲ್ಲಿ ಬಳಕೆಯಾಗುವ ವಿಮಾನಗಳಿಗೆ ಈ ಕಸರತ್ತು ಅತ್ಯಂತ ಮುಖ್ಯ. ಗೋವಾದ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಹಡಗು ಕಟ್ಟೆಯಲ್ಲಿರುವಂತೆ ಕಿರಿದಾದ ಜಾಗದಲ್ಲಿ ವೇಗವಾಗಿ ಹಾರಿ ಬಂದ ತೇಜಸ್ ಸುರಕ್ಷಿತವಾಗಿ ಇಳಿಯುವ ಮೂಲಕ ಯಶಸ್ವಿಯಾಗಿದೆ. ಈ ಕುರಿತಾದ ಮಾಹಿತಿಯನ್ನು ಎಚ್.ಎ.ಎಲ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.