ಛತ್ತೀಸ್ ಘಡ, ಸೆ.14(Daijiworld News/SS): ಛತ್ತೀಸ್ ಘಡದ ದಾಂತೇವಾಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದ್ದು, ಈ ವೇಳೆ ಭದ್ರತಾ ಸಿಬ್ಬಂದಿಗಳ ಗುಂಡೇಟಿಗೆ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಇಲ್ಲಿನ ಕುಟ್ರೆಮ್ ಗ್ರಾಮದ ಕಿರಂಡುಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಕುರಿತು ಮಾಹಿತಿ ಪಡೆದ ಪೊಲೀಸರು ಮತ್ತು ಸಿಆರ್ ಪಿಎಫ್ ಯೋಧರು ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ವೇಳೆ ಯೋಧರನ್ನು ಕಂಡು ತಪ್ಪಿಸಿಕೊಳ್ಳುವ ಭರದಲ್ಲಿ ನಕ್ಸಲರು ಗುಂಡು ಹಾರಿಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳೂ ಕೂಡ ಪ್ರತಿದಾಳಿ ನಡೆಸಿದ್ದು, ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಪ್ರದೇಶದಲ್ಲಿದಲ್ಲಿ ನಕ್ಸರು ತಂದಿದ್ದ 2 ರೈಫಲ್'ಗಳು, 9ಎಂಎಂ ಪಿಸ್ತೋಲ್, 12 ಬೋರ್ ರೈಫಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಭದ್ರತಾ ಸಿಬ್ಬಂದಿಗಳು ದಾಳಿ ನಡೆಸಿದ ವೇಳೆ ಹಲವು ನಕ್ಸಲರು ಪರಾರಿಯಾಗಿದ್ದು, ಅವರ ಶೋಧಕ್ಕೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ದಾಂತೇವಾಡ ಎಸ್ ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.