ಚಿಕ್ಕಮಗಳೂರು, ಸೆ 14 (Daijiworld News/RD): ಅವಧೂತ ವಿನಯ್ ಗುರೂಜಿ ಮುಂದಾಳತ್ವ ವಹಿಸಿ, ಸ್ವರ್ಣ ಪೀಠಿಕೇಶ್ವರಿ ಆಶ್ರಮದಲ್ಲಿ ಸಿಎಂ ಯಡಿಯೂರಪ್ಪ ಪೂಜೆ, ಹೋಮ-ಹವನ ನಡೆಸಿದ್ದಾರೆ. ಹೋಮ ಮುಗಿದು ಸಿಎಂ ಹೊರಡುತ್ತಿದ್ದಂತೆ, ಕಾರಿನ ಬಳಿ ಬಂದ ವಿನಯ್ ಗುರೂಜಿ, ಯಡಿಯೂರಪ್ಪರನ್ನು ತಬ್ಬಿಕೊಂಡು ನೆತ್ತಿಗೆ ಮುತ್ತಿಟ್ಟು, ಇನ್ನು ಮುಂದೆ ಎಚ್ಚರಿಕೆಯಿಂದ ಮುನ್ನಡೆಯಿರಿ, ಹೆಜ್ಜೆ ಹೆಜ್ಜೆಗೂ ಕಂಟಕ ಕಾದಿದೆ ಎಂದು ಎಚ್ಚರಿಸಿದರು.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ಅವಧೂತ ವಿನಯ್ ಗುರೂಜಿಯ ಸ್ವರ್ಣ ಪೀಠಿಕೇಶ್ವರಿ ಆಶ್ರಮದಲ್ಲಿ ಸಿಎಂ ಯಡಿಯೂರಪ್ಪ, ಶತರುದ್ರಯಾಗ, ವಿಷ್ಣು ಸಹಸ್ರ ನಾಮ, ಮೃತ್ಯುಂಜಯ ಹೋಮ, ಲಲಿತ ಸಹಸ್ರನಾಮ ಹಾಗೂ ಗಣಪತಿ ಹೋಮ ನಡೆಸಿದರು. ವಿನಯ್ ಗುರೂಜಿಯ ಹೋಮದ ಮುಂದಾಳತ್ವ ವಹಿಸಿ, 45 ಪುರೋಹಿತರ ನೇತೃತ್ವದಲ್ಲಿ ಸುಮಾರು ಆರು ಗಂಟೆ ಹೋಮ-ಹವನ ಮಾಡಿಸಿದರು. ಆದರೆ ಹೋಮ ಮುಗಿದು ಸಿಎಂ ಹೊರಡುತ್ತಿದ್ದಂತೆ, ಕಾರಿನ ಬಳಿ ಬಂದ ವಿನಯ್ ಗುರೂಜಿ, ಸಿಎಂ ಯಡಿಯೂರಪ್ಪಗೆ ತಬ್ಬಿಕೊಂಡು ನೆತ್ತಿಗೆ ಮುತ್ತಿಟ್ಟರು. ಎಚ್ಚರಿಕೆಯಿಂದ ಮುನ್ನಡೆಯಿರಿ, ಹೆಜ್ಜೆ ಹೆಜ್ಜೆಗೂ ಸಂಕಷ್ಟ ಎದುರಾಗಲಿದೆ ಎಂದು ಹೇಳಿದರು.
ವಿನಯ ಗುರೂಜಿಯವರ ಈ ನಡೆ ಮತ್ತು ಅವರು ನೀಡಿದ ಸಂದೇಶ, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಡಿಯೂರಪ್ಪರಿಗೆ ಒದಗಿದೆ ಕಂಟಕ ಯಾವುದು ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಇನ್ನೇನು ಸಮಸ್ಯೆ ತಲೆದೋರಲಿದೆ ಎಂಬ ಪ್ರಶ್ನೆ ಇದೀಗ ಕಾಡಿದೆ.