ಬೆಂಗಳೂರು, ಸೆ 14 (Daijiworld News/RD): ರಾಷ್ಟ್ರದ 22 ಅಧಿಕೃತ ಭಾಷೆಗಳಲ್ಲಿ ಹಿಂದಿ ಕೂಡ ಒಂದು, ಹಿಂದಿ ರಾಷ್ಟ್ರ ಭಾಷೆ ಎಂದು ಕೇಂದ್ರ ಸರ್ಕಾರ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ವಿರೊಧಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, " ಹಿಂದಿ ರಾಷ್ಟ್ರ ಭಾಷೆಯೆಂಬ ಸುಳ್ಳು ಪ್ರಚಾರ ನಿಲ್ಲಲಿ. ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪ್ಪುಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು. ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ" ಎಂದು ಹೇಳಿದ್ದಾರೆ.
ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ ಎಂದು ಪ್ರತಿಕ್ರಿಯಿಸುವ ಮೂಲಕ ಹಿಂದಿ ದಿವಸ್ ಆಚರಣೆ ವಿರೋಧ ವ್ಯಕ್ತಪಡಿಸಿದರು.
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ, ಹೆಚ್ ಡಿಕೆ ಟ್ವೀಟ್ ಮಾಡಿ, ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ 'ಹಿಂದಿ ದಿವಸ್' ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ ಎಂದು ಕಿಡಿಕಾರಿದ್ದಾರೆ.