ಚಿತ್ರದುರ್ಗ, ಸೆ.14(Daijiworld News/SS): ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಕಾನೂನು, ನ್ಯಾಯಾಲಯಕ್ಕಿಂತ ಯಾರೂ ಹಿರಿಯರಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಾವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆ ಎನ್ನುವುದು ಮುಖ್ಯವಲ್ಲ. ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು. ಯಾರ ಹಣೆ ಬರಹವನ್ನು ಯಾರೂ ನಿರ್ಧರಿಸಿರುವುದಿಲ್ಲ. ಎಲ್ಲಾ ಭಗವಂತನೇ ನಿರ್ಧರಿಸಿ ಭೂಮಿಗೆ ಕಳಿಸಿರುತ್ತಾನೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕೊಟ್ಟಿರುವುದು ನ್ಯಾಯಾಲಯ. ಕಾನೂನು, ನ್ಯಾಯಾಲಯಕ್ಕಿಂತ ಯಾರೂ ಹಿರಿಯರಲ್ಲ. ಕೆಲವರು ಕಾನೂನಿಗಿಂತ ದೊಡ್ಡವರು ಅಂದುಕೊಳ್ಳುತ್ತಾರೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದು ಹೇಳಿದರು.
ಡಿಕೆಶಿ ವಿಚಾರದಲ್ಲಿ ಯಾರೇ ಅವರ ಬೆನ್ನಿಗೆ ನಿಂತರೂ ನ್ಯಾಯಾಲಯವೇ ತೀರ್ಪು ಕೊಡಲಿದೆ. ಇದರಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದು ತಿಳಿಸಿದರು.
ನಾವು ಪ್ರತಿಪಾದಿಸಿದ ವಿಚಾರವನ್ನು ಎಂದೂ ಕೈ ಬಿಟ್ಟಿಲ್ಲ. ರಾಮ ಮಂದಿರವನ್ನು ಕಟ್ಟುವುದು ನಮ್ಮ ಆದ್ಯತೆಯ ವಿಷಯ. ನ್ಯಾಯಾಲಯ ಇದೀಗ ವಿಚಾರಣೆ ನಡೆಸುತ್ತಿದೆ. ರಾಮಮಂದಿರ ವಿವಾದವನ್ನು ಪರಿಹರಿಸುವ ರೀತಿಯ ತೀರ್ಪು ಸುಪ್ರೀಂ ಕೋರ್ಟ್ನಿಂದ ಹೊರಬೀಳಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.