ನವದೆಹಲಿ, ಸೆ.14(Daijiworld News/SS): ಕುಸಿಯುತ್ತಿರುವ ಆರ್ಥಿಕತೆಯನ್ನು ಸರಿದೂಗಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಫ್ತು ವಲಯ ಹಾಗೂ ವಸತಿ ವಲಯಗಳಿಗೆ ಉತ್ತೇಜನಾಕಾರಿ ಯೋಜನೆಗಳನ್ನು ಘೋಷಿಸಿದ್ದಾರೆ.
ಆಟೋಮೊಬೈಲ್, ರಿಯಲ್ ಎಸ್ಟೇಟ್ ಸೇರಿದಂತೆ ಬಹುತೇಕ ರಂಗಗಳು ಸದ್ಯ ತೀವ್ರ ಒತ್ತಡದಲ್ಲಿದ್ದು ಸರ್ಕಾರದಿಂದ ಉತ್ತೇಜನಕಾರಿ ಕ್ರಮಗಳನ್ನು ನಿರೀಕ್ಷಿಸಿತ್ತು. ಇದೀಗ ದೇಶಿಯ ರಫ್ತನ್ನು ಉತ್ತೇಜಿಸಲು ರಫ್ತುಗಳ ಮೇಲಿನ ತೆರಿಗೆಯನ್ನು ರದ್ದು ಪಡಿಸುವ ರಫ್ತು ಉತ್ಪನ್ನಗಳ ಮೇಲಿನ ಸುಂಕ ವಿನಾಯಿತಿ ಯೋಜನೆ ಘೋಷಿಸಿದ್ದಾರೆ.
ಕಳೆದ ತಿಂಗಳಿಗೆ ಹೋಲಿಸಿದರೆ ಆಗಸ್ಟ್ನಲ್ಲಿ ದೇಶಿಯ ರಫ್ತು ಪ್ರಮಾಣ 26.13 ಶತಕೋಟಿ ಡಾಲರ್ ಅಂದರೆ ಶೇ.6.05ಗೆ ಕುಸಿದಿದೆ. ಹಾಗಾಗಿ ವಿತ್ತ ಸಚಿವರು ರಫ್ತು ವಲಯಕ್ಕೆ ಉಪಶಮನ ನೀಡುವಂತಹ ಘೋಷಣೆ ಮಾಡಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಸ್ ಅನ್ನು ಸಂಪೂರ್ಣ ಸ್ವಂಚಾಲಿತ ಇಲೆಕ್ಟ್ರಾನಿಕ್ ಮರುಪಾವತಿ ಮಾರ್ಗವನ್ನು ತಿಂಗಳಾಂತ್ಯದೊಳಗೆ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಬಡ್ಡಿ ದರ ಕಡಿತನ್ನು ಗ್ರಾಹಕರಿಗೆ ತಲುಪಿಸಲು ಬ್ಯಾಂಕ್ ಗಳಿಂದ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಸಚಿವಾಲಯ ಕ್ರೆಡಿಟ್ ಔಟ್ ಫ್ಲೋ (ಸಾಲ ಕೊಡುವ ಪ್ರಕ್ರಿಯೆ) ಸುಧಾರಣೆ, ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವುದಕ್ಕೆ ಕ್ರಮ ಕೈಗೊಂಡಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.
ಸದ್ಯ ಜಾರಿಯಲ್ಲಿರುವ ಇನ್ಸೆಂಟೀವ್ ಯೋಜನೆಗೆ ಆರ್ಒಡಿಟಿಇಪಿ ಪರ್ಯಾಯವಾಗಲಿದ್ದು, ಸದ್ಯ ಅಸ್ತಿತ್ವದಲ್ಲಿರುವ ಯೋಜನೆಗಿಂತ ಈ ಯೋಜನೆ ರಫ್ತನ್ನು ಉತ್ತೇಜಿಸಲಿದೆ ಎಂದು ತಿಳಿಸಿದರು.