ಬೆಂಗಳೂರು, ಸೆ.14(Daijiworld News/SS): ತನಿಖಾ ಸಂಸ್ಥೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ಹಿಂದೆ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಚುನಾವಣೆ ಯಾವ ಸಂದರ್ಭದಲ್ಲಿಯಾದರೂ ಎದುರಾಗಲಿ. ಅದಕ್ಕೆ ನಮ್ಮ ಪಕ್ಷ ಸಿದ್ಧವಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಈಗಾಗಲೇ ಹಳೇ ಮೈಸೂರಿನ ಎಲ್ಲಾ ಜಿಲ್ಲೆಗಳ ಕಾರ್ಯಕರ್ತರ ಸಭೆ ನಡೆಸಲಾಗಿದ್ದು, ಇಂದು ನೆಲಮಂಗಲದ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಹಲವು ರಾಜ್ಯಗಳ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ನಮ್ಮ ಪಕ್ಷದಿಂದ ಯಾರೂ ಓಡಿಹೋಗಿಲ್ಲ ಎಂದು ಹೇಳಿದರು.
ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಕೇಂದ್ರ ಮುಗಿಸಲು ಪ್ರಯತ್ನ ನಡೆಸುತ್ತಿದೆ. ಸದ್ಯ ಕೇಂದ್ರದ ನಡವಳಿಕೆ ಹಾದಿ ತಪ್ಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಡಿ.ಕೆ.ಶಿವಕುಮಾರ್ ಪರ ಒಕ್ಕಲಿಗ ಸಮುದಾಯ ನಡೆಸಿದ ಪ್ರತಿಭಟನೆಯಲ್ಲಿ ಕುಮಾರಸ್ವಾಮಿ ಹಾಗೂ ತಾವು ಪಾಲ್ಗೊಳ್ಳದೇ ಇರುವ ಬಗ್ಗೆ ಅಪಾರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ. ವಿಚಾರಣೆಗೆ ದೆಹಲಿಗೆ ತೆರಳುವ ಮೊದಲು ಶಿವಕುಮಾರ್ ತಮ್ಮನ್ನು ಭೇಟಿಯಾಗಿದ್ದು, ಅವರಿಗೆ ಧೈರ್ಯ ಹೇಳಿ ಕಳುಸಿದ್ದೇನೆ. ಕುಮಾರಸ್ವಾಮಿ ಶಿವಕುಮಾರ್ ಅವರ ತಾಯಿಯನ್ನು ಭೇಟಿಯಾಗಿ ಸಮಧಾನ ಹೇಳಿದ್ದಾರೆ ಎಂದು ಹೇಳಿದರು.