ಬೆಂಗಳೂರು, ಸೆ 15 (Daijiworld News/RD): ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರ ಒತ್ತಡ ನಿವಾರಿಸುವ ಸಲುವಾಗಿ ಅವರ ಹುಟ್ಟು ಹಬ್ಬದ ದಿನದಂದು ರಜೆ ನೀಡಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ಹೇಳಿದ್ದಾರೆ.
''ಹುಟ್ಟುಹಬ್ಬದ ಶುಭಾಶಯ ಕಾರ್ಡ್ಗಳನ್ನು ಆಯಾ ಠಾಣೆಯ ಹಿರಿಯ ಅಧಿಕಾರಿ ಅಧಿಕಾರಿಗಳು ಖುದ್ದಾಗಿ ತಮ್ಮ ಠಾಣೆ, ಕಚೇರಿಯ ಸಿಬ್ಬಂದಿಗೆ ನೀಡಿ ಶುಭ ಕೋರಬೇಕು. ಪೊಲೀಸ್ ಸಿಬ್ಬಂದಿ ಕರ್ತವ್ಯದ ಒತ್ತಡದಿಂದ ಹೊರ ಬರುವ ಸಲುವಾಗಿ ಅವರ ಹುಟ್ಟು ಹಬ್ಬದ ದಿನದಂದಾದರೂ ಕುಟುಂಬದವರೊಂದಿಗೆ ಸಂತೋಷವಾಗಿ ಸಮಯ ಕಳೆಯಲು, ಯಾವುದೇ ಕರ್ತವ್ಯದ ಒತ್ತಡವಿದ್ದರೂ ಕಡ್ಡಾಯವಾಗಿ ರಜೆಯೊಂದನ್ನು ನೀಡಬೇಕು. ಇನ್ನು ಎಎಸ್ಸೈ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳು ಸಂಬಂಧಪಟ್ಟ ಮೇಲಾಧಿಕಾರಿಗಳ ಅನುಮತಿ ಪಡೆದು ರಜೆ ಪಡೆದುಕೊಳ್ಳಬಹುದಾಗಿದೆ'' ಎಂದು ಆಯುಕ್ತರು ಸೂಚಿಸಿದ್ದಾರೆ.
ಪ್ರತಿನಿತ್ಯ ಸದಾ ಒತ್ತಡದಲ್ಲಿ ಕೆಲಸ ಮಾಡುವ ನಗರ ಪೊಲೀಸರು ಇನ್ನು ಮುಂದೆ ತಮ್ಮ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸಬಹುದು. ಜೊತೆಗೆ ಎಲ್ಲಾ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಹುಟ್ಟುಹಬ್ಬಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದಲೇ ಹುಟ್ಟು ಹಬ್ಬದ ಶುಭಾಶಯ ಕೋರಲು ಗ್ರೀಟಿಂಗ್ ಕಾರ್ಡ್ಗಳನ್ನು ನೀಡಿ ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಒಂದು ಸೂಚನೆಯು ಪೊಲೀಸರಿಗೆ ತೃಪ್ತಿದಾಯಕವಾದರೆ, ಇನ್ನು ಒಂದೇ ದಿನದಲ್ಲಿ ಹೆಚ್ಚಿನ ಸಿಬ್ಬಂದಿಯ ಹುಟ್ಟುಹಬ್ಬ ಆಚರಣೆ ಇದ್ದಲ್ಲಿ ಮೇಲಧಿಕಾರಿಗಳು ರಜೆ ಕೊಟ್ಟು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವ ಪ್ರಶ್ನೆಯೂ ತಲೆದೋರಿದೆ.