ಬೆಂಗಳೂರು,ಸೆ 15 (Daijiworld News/RD): ಬಹುಕೋಟಿ ವಂಚನೆ ಪ್ರಕರಣದ ರೂವಾರಿ ಮೊಹ್ಮದ್ ಮನ್ಸೂರ್ ಖಾನ್ ಮನ್ಸೂರ್ ಖಾನ್ ಈಗಾಗಲೇ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಇದೀಗ ವಿಚಾರಣೆಯ ವೇಳೆ ಕಾಂಗ್ರೆಸ್ ಮಾಜಿ ಸಚಿವ ಆರ್.ವಿ.ದೇಶಪಾಂಡೆಗೆ 5 ಕೋಟಿ ರೂ. ನೀಡಿದ್ದೇನೆ ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈಗಾಗಲೇ ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಮನ್ಸೂರ್ ಖಾನ್ ಅನರ್ಹ ಶಾಸಕ ರೋಷನ್ ಬೇಗ್, ಸೇರಿದಂತೆ ಹಲವು ರಾಜಕಾರಣಿಗಳು, ಅಧಿಕಾರಿಗಳ ಹೆಸರನ್ನು ಸೂಚಿಸಿದ್ದನು. ಇದೀಗ ತನ್ನ ಬಳಿ ಹಣ ಪಡೆದಿರುವ ಪೈಕಿ ಆರ್.ವಿ. ದೇಶಪಾಂಡೆ ಸಹ ಒಬ್ಬರು ಎಂದು ಹೇಳಿದ್ದು, ಇಡಿ ಮೂಲಗಳು ಮಾಹಿತಿ ನೀಡಿವೆ. ಮನ್ಸೂರ್ ಖಾನ್ ನೀಡಿರುವ 19 ಪುಟಗಳ ಮಾಹಿತಿಯಲ್ಲಿ ಮನ್ಸೂರ್ ಖಾನ್ ರಾಜಕಾರಣಿಗಳು, ಕೆಎಎಸ್, ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಹೆಸರು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಬ್ಯಾಂಕ್ನಿಂದ 600 ಕೋಟಿ ರೂ. ಸಾಲ ಪಡೆದುಕೊಳ್ಳುವಾಗ ರೋಷನ್ ಬೇಗ್ ಜತೆಗೆ ದೇಶಪಾಂಡೆಯನ್ನು ಭೇಟಿ ಮಾಡಿದ್ದೆ. ಎನ್ಒಸಿ ಪಡೆದುಕೊಳ್ಳಲು ದೇಶಪಾಂಡೆಯ ಸಹಾಯ ಪಡೆದುಕೊಂಡಿದ್ದಾಗಿ ಖಾನ್ ಹೇಳಿದ್ದಾರೆ. ಅಲ್ಲದೆ, ಕಂದಾಯ ಇಲಾಖೆಯಲ್ಲಿದ್ದ ತಮ್ಮ ಫೈಲ್ ಬಿಡಿಸಿಕೊಳ್ಳಲು ದೇಶಪಾಂಡೆ 5 ಕೋಟಿ ರೂ. ನಗದು ಕೇಳಿದ್ದರು. ಅವರ ಮನೆಗೆ ಬಂದು ಹಣ ನೀಡಲು ದೇಶಪಾಂಡೆಯ ಸಹಾಯಕರು ಕೇಳಿಕೊಂಡಿದ್ದರು. ನಂತರ ಮೇ 29 ರಂದು ಕರೆ ಮಾಡಿ ಮತ್ತೆ 5 ಕೋಟಿ ರೂ ಕೇಳಿದ್ದರು. ಆಗ ನಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ ಮತ್ತೆ ಹಣ ನೀಡಲಿಲ್ಲ'ಎಂದು ಖಾನ್ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆದರೆ, ಈ ಆರೋಪವನ್ನು ತಳ್ಳಿಹಾಕಿದ ಕಾಂಗ್ರೆಸ್ ನಾಯಕ ದೇಶಪಾಂಡೆ, ತಾನು ಮನ್ಸೂರ್ ಖಾನ್ನನ್ನು ಆರ್.ರೋಷನ್ ಬೇಗ್ ಜತೆ ಒಮ್ಮೆ ಮಾತ್ರ ಭೇಟಿ ಮಾಡಿದ್ದೆ, ಹಾಗಾಗಿ ಮನ್ಸೂರ್ ಖಾನ್ ಸುಳ್ಳು ಆರೋಪವನ್ನು ತನ್ನ ಮೇಲೆ ಹೊರಿಸುತ್ತಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ.