ತುಮಕೂರು,ಸೆ 15 (Daijiworld News/RD): ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮದ್ಯಪಾನ ನಿಷೇಧ ಇದ್ದರೂ, ಕ್ಯಾರೇ ಮಾಡದೆ ಪಿಡಬ್ಲ್ಯೂಡಿ ಅಧಿಕಾರಿಗಳು ತಡರಾತ್ರಿಯವರೆಗೂ ಮದ್ಯ, ಮಾಂಸ ತಿಂದು ತೇಗಾಡಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯಲ್ಲಿ ನಡೆದಿದೆ.
ಕುಣಿಗಲ್ ಪಿಡಬ್ಲ್ಯೂಡಿ ಎಂಜಿನಿಯರ್ ದಿವಾಕರ್ ವರ್ಗಾವಣೆ ಆಗಿದ್ದಕ್ಕೆ ಐಬಿಯಲ್ಲಿ ಅವರಿಗೆ ಸೆಂಡ್ ಆಫ್ ಪಾರ್ಟಿ ಏರ್ಪಡಿಸಿಲಾಗಿತ್ತು. ಈ ವೇಳೆ ಪಾರ್ಟಿ ಮಾಡಿದ ಅಧಿಕಾರಿಗಳು, ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮದ್ಯಪಾನ ನಿಷೇಧ ಇದ್ದರೂ ತಡ ರಾತ್ರಿಯವರೆಗೂ ಗುಂಡು, ತುಂಡು ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಗುತ್ತಿಗೆದಾರರೂ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು, ರಾಜಕೀಯ ಮುಖಂಡರು ಬಾಡೂಟದಲ್ಲಿ ಭಾಗಿಯಾಗಿದ್ದರು. ತಡರಾತ್ರಿ 3 ಗಂಟೆವರೆಗೂ ಸರ್ಕಾರಿ ಬಂಗಲೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ.
ಇನ್ನು ದಿವಾಕರ್ ಗುತ್ತಿಗೆದಾರರಿಗೆ ತರಾತುರಿಯಲ್ಲಿ ಸುಮಾರು 28 ಕೋಟಿ ರೂ. ಬಿಲ್ ಪಾಸ್ ಮಾಡಿದ್ದು, ಇದಕ್ಕಾಗಿ ಗುತ್ತಿಗೆದಾರರಿಂದ ಸುಮಾರು 10 ಲಕ್ಷ ರೂ. ವಸೂಲಿ ಮಾಡಿದ್ದರು, ಈ ಹಣದಲ್ಲಿಯೇ ಅಧಿಕಾರಿಗಳು ಭರ್ಜರಿಯಾಗಿ ತಿಂದು ತೇಗಾಡಿ ಎಂಜಾಯ್ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.