ಬೆಂಗಳೂರು, ಸೆ 15 (Daijiworld News/RD): ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸಂತ್ರಸ್ತರು ಕಷ್ಟ ಪಡುತ್ತಿದ್ದಾರೆ. ದಿನಕ್ಕೊಂದು ದೇಶ ಸುತ್ತುವ ಮೋದಿ ಅವರು, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ, ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಪ್ರಧಾನಿ ನರೇಂದ್ರ ಮೋದಿಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ’ದಿನಕ್ಕೊಂದು ದೇಶ ಸುತ್ತುವ, ಗಳಿಗೆಗೊಂದು ವೇಷ ಬದಲಿಸುವ ಈಗಿನ ಪ್ರಧಾನಿಗಳಿಗೆ ಒಂದು ಘಳಿಗೆ ಬಂದು ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ' ಎಂದು ಹೇಳಿದ್ದಾರೆ.
ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ನಡೆಸಿದ ಚಂದ್ರಯಾನ-2 ಪ್ರಯೋಗ, ನರೇಂದ್ರ ಮೋದಿ ಹಾಜರು ಹಾಕಿದರೂ ವಿಫಲವಾಯಿತು. ಪ್ರಧಾನಿಗಳು ಅಷ್ಟೇ ಸಮಯವನ್ನು ಅತಿವೃಷ್ಟಿ ಪೀಡಿತ ಪ್ರದೇಶದ ಭೇಟಿಗೂ ನೀಡಿದ್ದರೆ ಪ್ರಾಯಶ್ಚಿತ ಮಾಡಿಕೊಂಡಂತಾಗುತ್ತಿತ್ತು ಎಂದು ಹೇಳಿದ್ದಾರೆ.
ಅತಿವೃಷ್ಠಿ ಪೀಡಿತ ಪ್ರದೇಶಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಕೇಂದ್ರ ಸರ್ಕಾರ ದಿವಾಳಿಯಾಗಿ ಹೋಗಿರುವ ಸೂಚನೆ ಇದು. ಇದು ನಿಜವಲ್ಲದೆ ಇದ್ದರೆ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.