ನವದೆಹಲಿ, ಸೆ.23 (DaijiworldNews/AA): ಇನ್ನು ಮುಂದೆ ದೇಶದಲ್ಲಿ ಸ್ಮಾರ್ಟ್ಫೋನ್ ಸ್ಕ್ರೀನ್ ಗಾರ್ಡ್ಗಳನ್ನು ಮಾರಾಟ ಮಾಡಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಐಎಸ್) ಗುಣಮಟ್ಟದ ಪ್ರಮಾಣಪತ್ರ ಪಡೆಯುವುದು ಕಡ್ಡಾಯ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಸೆಪ್ಟೆಂಬರ್ 21ರಂದು ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸರಕುಗಳ (ಕಡ್ಡಾಯ ನೋಂದಣಿ ಅವಶ್ಯಕತೆ) ಆದೇಶ, 2021ರ ಅಡಿಯಲ್ಲಿ ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಟರ್ಗಳನ್ನು ಸೇರಿಸಲಾಗಿದೆ. ಭಾರತೀಯ ಗುಣಮಟ್ಟ ಮಾನದಂಡ ನಿಯಮಗಳು 2027ರ ಏಪ್ರಿಲ್ 1ರಿಂದ ಅನ್ವಯವಾಗಲಿದ್ದು, ಅಲ್ಲಿಂದ ಮುಂದೆ ನಿಯಮ ಉಲ್ಲಂಘಿಸಿ ಮಾರಾಟ ಮಾಡಲು ಅವಕಾಶವಿರುವುದಿಲ್ಲ ಎಂದು ಕೆಂದ್ರ ಸರ್ಕಾರ ತಿಳಿಸಿದೆ.
ಕಡ್ಡಾಯ ಬಿಐಎಸ್ ನಿಯಮ ವ್ಯಾಪ್ತಿಗೆ ಸೇರಿದ 66ನೇ ಉತ್ಪನ್ನ ಇದಾಗಿದೆ. ಈ ಹಿಂದೆ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಚಾರ್ಜರ್ಗಳು, ಎಲ್ಇಡಿ ಟಿವಿ, ಮೈಕ್ರೋವೇವ್ ಓವನ್, ಪ್ರಿಂಟರ್ ಹಾಗೂ ಸೆಟ್ಟಾಪ್ ಬಾಕ್ಸ್ಗಳಿಗೆ ಈ ನಿಯಮವನ್ನು ಜಾರಿಗೆ ತರಲಾಗಿತ್ತು.
ಭಾರತದಲ್ಲಿ ವಾರ್ಷಿಕ 40 ಕೋಟಿ ಹೆಚ್ಚು ಟೆಂಪರ್ಡ್ ಗ್ಲಾಸ್ಗಳು ಮಾರಾಟವಾಗುತ್ತವೆ. ಇದರ ಒಟ್ಟು ಚಿಲ್ಲರೆ ಮೌಲ್ಯ ಬರೋಬ್ಬರಿ 20,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಕಳಪೆ ಗುಣಮಟ್ಟದ ಆಮದು ಉತ್ಪನ್ನಗಳಿಗೆ ಬ್ರೇಕ್ ಹಾಕಲಿದ್ದು, ಭಾರತೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ಸಿಗುವಂತೆ ಮಾಡಲಿದೆ. ಜೊತೆಗೆ ಸ್ಥಳೀಯವಾಗಿ ಉತ್ಪಾದನೆ ಆರಂಭಿಸಿರುವ ದೇಶೀಯ ಕಂಪನಿಗಳಿಗೆ ಬಲ ತುಂಬಲಿದೆ.