ನವದೆಹಲಿ, ಸೆ.23 (DaijiworldNews/AK):ನೀವು ಮಾಡಿರುವುದು ದೇಶದ್ರೋಹ, ನಾನು ಚುನಾವಣಾ ಆಯೋಗ ಮತ್ತು ಅದರ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಸಮಯ ಬಂದೇ ಬರುತ್ತೆ, ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಿಮ್ಮನ್ನ ಹಿಡಿಯುತ್ತೇನೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.

ʻಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಚುನಾವಣಾ ಆಯೋಗದೊಳಗೆ ಆಂತರಿಕ ಭಿನ್ನಮತ ಉಂಟಾಗಿದೆʼ ಎನ್ನುವ ವರದಿ ಬೆನ್ನಲ್ಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಂಡಿದ್ದು ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗದ ಕ್ರಮಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿವೆ. ಆಯೋಗ ಕೈಗೊಳ್ಳುತ್ತಿರುವ ಕ್ರಮಗಳು ತಪ್ಪು. ಈ ಪ್ರಕ್ರಿಯೆ ಮತ ಕಳ್ಳತನಕ್ಕೆ ಸಮಾನವಾಗಿದ್ದು, ದೇಶದ ಸಂವಿಧಾನಾತ್ಮಕ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಭಾರತದಲ್ಲಿ ಮತಗಳ್ಳತನವು ದೇಶದ ಜನರ ವಿರುದ್ಧದ ಕೃತ್ಯ ಮತ್ತು ನಮ್ಮ ಸಂವಿಧಾನದ ಮೇಲಿನ ನೇರ ದಾಳಿ. ಇದನ್ನು ನಡೆಸಿರುವ ಬಿಜೆಪಿ, ಆರ್ಎಸ್ಎಸ್ ಮತ್ತು ಚುನಾವಣಾ ಆಯೋಗ ದೇಶದ್ರೋಹ ಎಸಗಿವೆ, ನ್ಯಾಯ ದೊರೆಯಲಿದೆ ಎಂದು ಬರೆದುಕೊಂಡಿದ್ದಾರೆ.