ನವದೆಹಲಿ, ಸೆ.23 (DaijiworldNews/AK): ಈ ಭಾನುವಾರ ರಜಾ ದಿನ ಇದ್ದರೂ ಬ್ಯಾಂಕುಗಳ ಎಂದಿನಂತೆ ಕಾರ್ಯನಿರ್ವಹಿಲಿವೆ. ಮುಂಬರುವ ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳಿಂದ ಮುಷ್ಕರ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರವು ಭಾನುವಾರ ಬ್ಯಾಂಕ್ ಕಚೇರಿ ತೆರೆಯಲು ಅನುಮತಿಸಿದೆ. 2026ರ ಸೆಪ್ಟೆಂಬರ್ 27 ರಂದು ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಲಿವೆ ಎಂದು ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರಕಟಣೆ ಪ್ರಕಾರ, ಎಲ್ಲಾ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ ಜೋಡಿತ ಕಚೇರಿಗಳು, ಕರೆನ್ಸಿ ಚೆಸ್ಟ್ಗಳು ಸೆಪ್ಟೆಂಬರ್ 27ರಂದು ಪೂರ್ಣ ರೀತಿಯಲ್ಲಿ ಕಾರ್ಯನಿರ್ವಹಿಸಲು ಆರ್ಬಿಐ ಅನುಮೋದಿಸಿದೆ. ಎಲ್ಲಾ ಸರ್ಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಾರ್ವಜನಿಕ ಸೇವೆಗೆ ಭಾನುವಾರವೂ ತೆರೆದಿರುತ್ತವೆ.
ಸೆಪ್ಟೆಂಬರ್ 28ರಿಂದ 30ವರೆಗೆ ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಇದೆ. ಸೆಪ್ಟೆಂಬರ್ 26 ಮತ್ತು 27ರಂದು ನಾಲ್ಕನೇ ಶನಿವಾರ ಮತ್ತು ಭಾನುವಾರವಾದ್ದರಿಂದ ರಜೆಗಳಿವೆ. ಹೀಗಾಗಿ, ಸೆಪ್ಟೆಂಬರ್ 26ರಿಂದ 30ರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕ್ ಕಚೇರಿ ಬಾಗಿಲು ಹಾಕುವ ಸಾಧ್ಯತೆ ಇತ್ತು. ಇದರಿಂದ ಗ್ರಾಹಕರಿಗೆ ಆಗುವ ದೊಡ್ಡ ಅನಾನುಕೂಲಗಳನ್ನು ಗಮನಿಸಿ, ಭಾನುವಾರ ಬ್ಯಾಂಕ್ ಕಚೇರಿ ತೆರೆಯುವ ಕ್ರಮವನ್ನು ಆರ್ಬಿಐ ತೆಗೆದುಕೊಂಡಿದೆ.
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬ್ಯಾಂಕ್ ಮಹಾ ಒಕ್ಕೂಟವಾದ ಯುಎಫ್ಬಿಯು ಮುಷ್ಕರ ನಡೆಸುತ್ತಿದೆ. ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ವೀಕಾಫ್ ಕೊಡಬೇಕು ಎಂಬುದು ಪ್ರಮುಖ ಬೇಡಿಕೆ. ಸೆಪ್ಟೆಂಬರ್ 13ರಂದು ಈಗಾಗಲೆ ಒಂದು ದಿನದ ಮುಷ್ಕರ ನಡೆಸಲಾಗಿದೆ. ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನ ಮುಷ್ಕರ ನಡೆಸಲಿದೆ.