ನವದೆಹಲಿ, ಸೆ.23 (DaijiworldNews/AK): ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಸಾಫ್ಟ್ವೇರ್ ನಿರ್ವಹಣೆ ಕುರಿತು ಆಯೋಗದೊಳಗೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಮಾಧ್ಯಮ ವರದಿಗಳನ್ನು ಭಾರತೀಯ ಚುನಾವಣಾ ಆಯೋಗ ತಳ್ಳಿಹಾಕಿದೆ.

ಆಯೋಗದ ಸದಸ್ಯರು ದಾಖಲಿಸುವ ಲಿಖಿತ ಆಕ್ಷೇಪಣೆಗಳು, ತಾಂತ್ರಿಕ ಟಿಪ್ಪಣಿಗಳು ಮತ್ತು ಆಂತರಿಕ ಅವಲೋಕನಗಳು ಯಾವುದೇ ಸಂಸ್ಥೆಯ ಸಹಜ ಆಡಳಿತ ಪ್ರಕ್ರಿಯೆಯ ಸಾಮಾನ್ಯ ಭಾಗವೇ ಹೊರತು, ಅವು ಆಂತರಿಕ ಕಂದಕ ಅಥವಾ ಭಿನ್ನಾಭಿಪ್ರಾಯವಲ್ಲ ಎಂದು ಆಯೋಗ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿ ಹಾಗೂ 2023ರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಹು-ಸದಸ್ಯ ಸಾಂಸ್ಥಿಕ ಸಮಿತಿಯಾಗಿದೆ. ಆಯೋಗ ಹೊರಡಿಸುವ ಪ್ರತಿಯೊಂದು ಆದೇಶ ಮತ್ತು ನಿರ್ಧಾರಗಳು ಸಂಪೂರ್ಣ ಕಾನೂನುಬದ್ಧವಾಗಿದ್ದು, ಮೂವರು ಆಯುಕ್ತರ ಸರ್ವಾನುಮತ ಅಥವಾ ಬಹುಮತದ ಆಧಾರದಲ್ಲೇ ಜಾರಿಗೆ ಬಂದಿವೆ.
ಕರಡು ಹಂತದಲ್ಲಿ ಆಯುಕ್ತರು ಎತ್ತುವ ಪ್ರಶ್ನೆಗಳು, ಸಲಹೆಗಳು ಚುನಾವಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮತದಾರರ ಹಕ್ಕುಗಳನ್ನು ರಕ್ಷಿಸಲು ನೆರವಾಗುತ್ತವೆ. ಪ್ರಜಾಪ್ರಭುತ್ವ ಸಂಸ್ಥೆಯಲ್ಲಿ ವಿಭಿನ್ನ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವುದು ಸಾಮಾನ್ಯ ಪದ್ಧತಿಯಾಗಿದೆ.
ಕಳೆದ 10 ತಿಂಗಳ ಅವಧಿಯಲ್ಲಿ ಆಯೋಗ ತೆಗೆದುಕೊಂಡ ನೂರಾರು ನಿರ್ಧಾರಗಳು, ಜಾರಿಗೆ ತಂದ 40ಕ್ಕೂ ಹೆಚ್ಚು ಹೊಸ ಉಪಕ್ರಮಗಳು ಮತ್ತು ಸಮಗ್ರ ಸುಧಾರಣೆಗಳನ್ನು ಕಡೆಗಣಿಸಿ, ಕೇವಲ ಕೆಲವೇ ಕೆಲವು ಆಂತರಿಕ ಟಿಪ್ಪಣಿಗಳನ್ನು ಮುಂದಿಟ್ಟುಕೊಂಡು ವರದಿ ಮಾಡುವುದು ವಾಸ್ತವದ ಒಂದು ಭಾಗವನ್ನು ಮಾತ್ರ ಬಿಂಬಿಸಿದಂತಾಗುತ್ತದೆ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.