ಕಲಬುರಗಿ, ಸೆ 15 (Daijiworld News/RD): ರಾಜ್ಯದಲ್ಲಿ ಆಪರೇಷನ್ ಕಮಲ ಪಾರ್ಟ್-2 ಇಲ್ಲ, ಪ್ರಧಾನಿ ನರೇಂದ್ರ ಮೋದಿಯ ಆಡಳಿತ ವೈಖರಿಯನ್ನು ಮೆಚ್ಚಿ, ತಾವಾಗಿಯೇ ಹಲವು ಶಾಸಕರು ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.
ಜೆಡಿಎಸ್ ಶಾಸಕರು ಬಿಜೆಪಿಗೆ ಸೇರುತ್ತಾರೆಂಬ ಸುದ್ದಿಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಈಗಾಗಲೇ ಮಹಾರಾಷ್ಟ್ರದಲ್ಲಿ ಎಲ್ಲಾ ಪಾರ್ಟಿ ಕ್ಲೀನ್ ಆಗಿದೆ. ಬಹುತೇಕರು ಸ್ವಯಂ ಪ್ರೇರಿತರಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕನಾಟಕದಲ್ಲೂ ಅದೇ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ವೇಳೆ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗುವುದು. ಉದ್ಘಾಟನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಸಿಎಂ ಯಡಿಯೂರಪ್ಪ ಅವರೇ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದರು. ಈಗ ಅವರ ನೇತೃತ್ವದಲ್ಲಿಯೇ ನಿಲ್ದಾಣ ಶುಭಾರಂಭಗೊಳ್ಳುತ್ತದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಹೇಳಿದರು.
ಅಮಿತ್ ಶಾ ಅವರ ಒಂದು ದೇಶ ಒಂದೇ ಭಾಷೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೂ ಯಾವುದೇ ಭಾಷೆಯನ್ನು ಯಾರ ಮೇಲು ಹೇರಬಾರದು. ನಾವು ಅಮಿತ್ ಶಾ ಅವರಿಗೆ ಮನವರಿಕೆ ಮಾಡುತ್ತೇವೆ. ಅವರ ನಿಲುವು ಏನು ಎಂದು ಸಹ ತಿಳಿದುಕೊಳ್ಳುತ್ತೆವೆ ಎಂದರು.