ನವದೆಹಲಿ, ಸೆ.23 (DaijiworldNews/AA): ನೆರೆಹೊರೆಯ ದೇಶದ ಮೇಲಿನ ಆಕ್ರಮಣದಂತಹ ಕೃತ್ಯಗಳಿಂದ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುತ್ತವೆ ಎಂದು ಹೇಳಿರುವ ಭಾರತ ಸರ್ಕಾರ, ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಗಳನ್ನು ತೀವ್ರವಾಗಿ ಖಂಡಿಸಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿರುವ ದಾಳಿಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ ಹಲವು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ನೆರೆಹೊರೆಯವರ ವಿರುದ್ಧದ ಇಂತಹ ಆಕ್ರಮಣಕಾರಿ ಧೋರಣೆಯು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ವಿರುದ್ಧವಾಗಿದೆ" ಎಂದು ತಿಳಿಸಿದ್ದಾರೆ.
"ಗಡಿಪಾರಿನ ಭಯೋತ್ಪಾದನೆಯ ವಿರುದ್ಧ ಇಸ್ಲಾಮಾಬಾದ್ ಬಾಯಿಮಾತಿಗೆ ಕತೆ ಹೇಳುವುದನ್ನು ಬಿಟ್ಟು ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನವು ಗಡಿಪಾರಿನ ಭಯೋತ್ಪಾದನೆಯ ವಿರುದ್ಧ ನಂಬಲರ್ಹ ಮತ್ತು ಕಠಿಣ ಕ್ರಮ ಕೈಗೊಳ್ಳುವುದನ್ನು ಪ್ರದರ್ಶಿಸಬೇಕು. ಅವರು ಏನು ಹೇಳುತ್ತಾರೋ ಅದನ್ನು ಜಗತ್ತು ನಂಬಬೇಕಾದರೆ, ಮೊದಲು ಅವರು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಅಫ್ಘಾನಿಸ್ತಾನದ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ಅಲ್ಲಿನ ಸಾರ್ವಜನಿಕರ ಹಿತರಕ್ಷಣೆಗೆ ಭಾರತದ ಸಂಪೂರ್ಣ ಬೆಂಬಲವಿದೆ" ಎಂದು ಹೇಳಿದ್ದಾರೆ.