ನವದೆಹಲಿ, ಸೆ.23 (DaijiworldNews/AA): ಭಾರತದ ಆಂತರಿಕ ವಿಷಯಗಳ ಕುರಿತು ಪ್ರತಿಕ್ರಿಯಿಸಲು ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ)ಗೆ ಯಾವುದೇ ಅಧಿಕಾರ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದೆ.

ಓಐಸಿ ರಾಷ್ಟ್ರಗಳ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತು ಮಾಡಲಾದ 'ಅನಗತ್ಯ ಮತ್ತು ತಪ್ಪಾದ' ಉಲ್ಲೇಖಗಳನ್ನು ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ. ಜೊತೆಗೆ 'ಜಮ್ಮು- ಕಾಶ್ಮೀರ ಹಾಗೂ ಲಡಾಖ್ ದೇಶದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ' ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಕಟ್ಟುಕಥೆಯ ಮತ್ತು ದುರುದ್ದೇಶಪೂರಿತ ಪ್ರಚಾರಕ್ಕೆ ವೇದಿಕೆ ಕಲ್ಪಿಸಿದ್ದಕ್ಕಾಗಿ ಓಐಸಿ ಯನ್ನು ವಿದೇಶಾಂಗ ಸಚಿವಾಲಯ ಟೀಕಿಸಿದೆ. ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಉದ್ಭವಿಸುವ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುವಂತೆ ಓಐಸಿಗೆ ಆಗ್ರಹ ಮಾಡಿದೆ.