ಬೆಂಗಳೂರು, ಸೆ.23 (DaijiworldNews/AA): ವಿಮಾ ಕಂಪನಿಗಳಿಗೆ ಸಲ್ಲಿಕೆಯಾಗುವ ವಂಚನೆಪೂರಿತ ಕ್ಲೇಮ್ಗಳ ಕುರಿತು ದೂರುಗಳನ್ನು ದಾಖಲಿಸಿಕೊಂಡು ತ್ವರಿತ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ದೇಶಾದ್ಯಂತ ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈ ಎಸ್ಐಟಿ ರಚಿಸಲಾಗಿದೆ ಎಂದು ಗೃಹ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ತನಿಖಾ ತಂಡದಲ್ಲಿ ಪೊಲೀಸ್ ಮಹಾನಿರೀಕ್ಷಕರ (ಐಜಿಪಿ) ಹುದ್ದೆಯ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ಹಾಗೂ ಸಿಐಡಿಯಿಂದ ನಾಮನಿರ್ದೇಶನಗೊಳ್ಳುವ ಪೊಲೀಸ್ ಅಧೀಕ್ಷಕರನ್ನು (ಎಸ್ಪಿ) ಸದಸ್ಯರನ್ನಾಗಿ ನೇಮಿಸಲಾಗಿದೆ. ಜೊತೆಗೆ ಓರ್ವ ಉಪ ಪೊಲೀಸ್ ಅಧೀಕ್ಷಕ (ಡಿವೈಎಸ್ಪಿ) ಹಾಗೂ ಮೂವರು ಇನ್ಸ್ಪೆಕ್ಟರ್ಗಳು ಈ ತಂಡದ ಸದಸ್ಯರಾಗಿರಲಿದ್ದಾರೆ. ವಿಮಾ ಕಂಪನಿಗಳಿಂದ ಸ್ವೀಕರಿಸುವ ಎಲ್ಲಾ ವಂಚನೆ ದೂರುಗಳನ್ನು ಎಸ್ಐಟಿ ಸಮಗ್ರವಾಗಿ ತನಿಖೆ ನಡೆಸಲಿದೆ.