ಹೈದರಾಬಾದ್, ಸೆ 15 (Daijiworld News/RD): ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸೈಂಟ್ ಫ್ರಾನ್ಸಿನ್ಸ್ ಕಾಲೇಜ್ ಫಾರ್ ವುಮೆನ್ಸ್ ನಲ್ಲಿ ಶಾರ್ಟ್ಸ್, ಸ್ಲೀವ್ ಲೆಸ್, ಜೀನ್ಸ್ ಉಡುಪುಗಳನ್ನು ಧರಿಸಿ ಕ್ಯಾಂಪಸ್ ಪ್ರವೇಶಿಸುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿದೆ. ಈ ಬಗ್ಗೆ ಗರಂ ಆದ ವಿದ್ಯಾರ್ಥಿನಿಯರು ಆಡಳಿತ ಮಂಡಳಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಈ ಕುರಿತು ಆಗಸ್ಟ್ 01ರಿಂದಲೇ ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ ಪ್ರಕಟಣೆ ಹಾಕಿದ್ದರೂ ಕೂಡ ವಿದ್ಯಾರ್ಥಿಗಳು ಇದನ್ನು ಪಾಲಿಸದೆ ಇದ್ದುದನ್ನು ಗಮನಿಸಿದ ಕಾಲೇಜು ಆಡಳಿತ ಮಂಡಳಿ, ಇದೇ ತಿಂಗಳಿನಿಂದ ಡ್ರೆಸ್ ಕೋಡ್ ಕಡ್ಡಾಯಗೊಳಿಸಿದ್ದಲ್ಲದೆ, ನಿಯಮ ಮೀರಿದವರನ್ನು ತರಗತಿಯೊಳೆಗೆ ಸೇರಿಸಬಾರದು ಎಂದು ಆದೇಶ ನೀಡಿದೆ.
ಇದೀಗ ಕಾಲೇಜಿನ ಹೊಸ ನಿಯಮಕ್ಕೆ ದಂಗಾಗಿರುವ ವಿದ್ಯಾರ್ಥಿನಿಯರು, ಮಹಿಳಾ ಸಬಲೀಕರಣದ ಬಗ್ಗೆ ಧ್ವನಿ ಎತ್ತುವ ಕಾಲವಿದು, ಈ ರೀತಿಯ ಸಮಾಜ ವಿರೋಧಿ ವಸ್ತ್ರ ಸಂಹಿತೆಯನ್ನು ನಾವು ವಿರೋಧಿಸುತ್ತೇವೆ ಎಂದು ವಿಡಿಯೋ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಕಾಲೇಜಿನ ಹಳೆ ವಿದ್ಯಾರ್ಥಿನಿ ಜನೋಬಿಯಾ ತಂಬಿ ಅವರು ಈ ನಿಯಮವನ್ನು ಖಂಡಿಸಿ, ಈ ಕುರಿತು ಲೇಖನ, ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಸೆಪ್ಟೆಂಬರ್ 16 ರಂದು ಈ ಬಗ್ಗೆ ಕಾಲೇಜಿನ ಗೇಟ್ ಮುಂದೆ ನಿಂತು ಪ್ರತಿಭಟಿಸೋಣ ಎಂದು ಹೇಳಿದ್ದಾರೆ.